ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಮೂವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ತಲಕ್ಕೇರಿ ನಿವಾಸಿ ನಿಮಿಲ್ ಆರ್.ಕೆ (37), ಮಡಿಕೇರಿ ನಿವಾಸಿಗಳಾದ ಇರ್ಶಾದ್ (40) ಮತ್ತು ಮುಸ್ತಾಫ (49) ಬಂಧಿತರು.

ಕೇರಳದ ಪಯ್ಯನ್ನೂರಿನ ಜುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ (44) ಅವರು ಜುಲೈ 29ರಂದು ನಸುಕಿನ ಜಾವ ಸುಮಾರು 2:45 ಗಂಟೆಗೆ ಮಹಾರಾಷ್ಟ್ರದಿಂದ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಬರುತ್ತಿದ್ದ ವೇಳೆ, ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪಾಡಿ ಜಂಕ್ಷನ್ನಲ್ಲಿ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನ ಬಂದ 6-7 ಜನರಿದ್ದ ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಹಲ್ಲೆ ನಡೆಸಿ 180 ಗ್ರಾಮ್ ಚಿನ್ನಾಭರಣಗಳಿದ್ದ ಸಟ್ ಕೇಸನ್ನು ಕಿತ್ತುಕೊಂಡು ಕಾರು ಸಹಿತ ಪರಾರಿಯಾಗಿದ್ದರು.

ಕಾರಿನೊಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ.20 ಲಕ್ಷ), ಎರಡು ಮೊಬೈಲ್ ಫೋನ್ (ರೂ.10,000) ಹಾಗೂ ಕಾರು (ಅಂದಾಜು ರೂ.3 ಲಕ್ಷ) ಸೇರಿದಂತೆ ಒಟ್ಟು 23,10,000 ಮೌಲ್ಯದ ದರೋಡೆ ಮಾಡಿದ್ದರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 84/2026 ಕಲಂ: 310(2), 311, 324(2), 137(2), 126(2) ಭಾರತೀಯ ನ್ಯಾಯ ಸಂಹಿತೆ-2023 2(b) KPDLP Act ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.

ತನಿಖೆಯ ಸಂದರ್ಭದಲ್ಲಿ ಜುಲೈ 30ರಂದು ಬೆಳಗ್ಗೆ 11:30 ಗಂಟೆಗೆ ದರೋಡೆಕೋರರು ಚಲಾಯಿಸಿ ಹೋಗಿದ್ದ ವಿಕಾಸ್ ಧನವಡೆ ಅವರಿಗೆ ಸೇರಿದ್ದ ಮಾರುತಿ ಡಿಸೈರ್ ಕಾರು ನಂಬರ್ ಪ್ಲೇಟ್ ಇಲ್ಲದೇ ಇರುವ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಪಚ್ಚಿನಡ್ಕ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಆರೋಪಿಗಳು ಬಿಟ್ಟು ಹೋಗಿದ್ದನ್ನು ಪತ್ತೆಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಸಹಕರಿಸಿದ ತಲಕ್ಕೇರಿ ಜಿಲ್ಲೆಯ ಮಂಬರಮ್ ಗ್ರಾಮದ ನಿಮಿಲ್ ಆರ್.ಕೆ (37) ಎಂಬಾತನನ್ನು ಪಣಂಬೂರು ಠಾಣೆ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿ ಕೇರಳದ ಕಣ್ಣೂರು ಜಿಲ್ಲೆಯ ಚಾಲ ಎಂಬಲ್ಲಿರುವ ASTER MIMS ಆಸ್ಪತ್ರೆಯ ಹತ್ತಿರ ವಶಕ್ಕೆ ಪಡೆದಿದ್ದಾರೆ.

View this post on Instagram

A post shared by News Karnataka (@newskarnataka)