ಬಂಟ್ವಾಳ: ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಆಟ ಆಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಬಂಟ್ವಾಳ ‌ತಾಲೂಕಿನ‌ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಡಿ. 8 ರಂದು ನಡೆದಿದೆ.

ಬುಡೋಳಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಾಕ್ಷಿ ಎಂಬ ಬಾಲಕಿ ಜೋಕಾಲಿಗೆ ಬಲಿಯಾದವಳು. ಬುಡೋಳಿ ಸಮೀಪದ ಶೇರಾ ಶಾಲೆಯಲ್ಲಿ 4 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ, ಮನೆಯಲ್ಲಿ ಕೋಣೆಯೊಂದರಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕುತ್ತಿಗೆ ಹಗ್ಗ ಸಿಲುಕಿದ್ದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆ‌ ಸಾವನ್ನಪ್ಪಿದ್ದಳು.

ಚುರುಕಿನ ವ್ಯಕ್ತಿತ್ವ ವುಳ್ಳ ಈ ಬಾಲಕಿ, ಆಗಾಗ್ಗೆ ಕಿಟಕಿಗೆ ಹತ್ತಿ ಇಳಿಯುವುದು, ಮೇಲಿನಿಂದ ಕೆಳಗೆ ಜಿಗಿಯುವಂತಹಾ ಚಟುವಟಿಕೆಯಲ್ಲಿ‌ವಿಶೇಷ ಆಸಕ್ತಿ ಉಳ್ಳವಳಾಗಿದ್ದು, ಇದೇ ತೆರದಲ್ಲಿ ಆಡುವ ವೇಳೆ ಲಾಡಿಹಗ್ಗ ಕೊರಳಿಗೆ ಹಾಕಿಕೊಂಡಿರಬಹುದು ಎಂದು ವಿಟ್ಲ ವೃತ್ತ ನಿರೀಕ್ಷಕ ನಾಗರಾಜ್‌ ತಿಳಿಸಿದ್ದಾರೆ.

ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿತ್ತು. ವಿಟ್ಲ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.