ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಹಾಗೂ ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಜಂಟಿ ಆಶ್ರಯದಲ್ಲಿ ಕುಲಶೇಕರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ ಬಯಲು ಮೈದಾನದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ 2026’ ಕ್ಕೆ ಗುರುವಾರ (ಫೆ. 26) ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು. ಈ ಅಧಿವೇಶನವು “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲಸಿದೆ” (ಕೊಲೊ. 3:16) ಎಂಬ ಪ್ರಮುಖ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದೆ.

ಉದ್ಘಾಟನೆ ಮತ್ತು ಪವಿತ್ರ ಬೈಬಲ್ ಮೆರವಣಿಗೆ ಪವಿತ್ರ ಬೈಬಲ್‌ನ ಭವ್ಯ ಮೆರವಣಿಗೆಯೊಂದಿಗೆ ಅಧಿವೇಶನವು ಆರಂಭವಾಯಿತು. ಬೈಬಲ್ ಅನ್ನು ಬಲಿಪೀಠದ ಮಧ್ಯದಲ್ಲಿರಿಸಿ, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾದ (ವಿಕಾರ್ ಜನರಲ್) ಅತಿ ವಂದನೀಯ ಮೊನ್ಸಿಂಜರ್ ಮ್ಯಾಕ್ಸಿಂ ನೊರೋನ್ಹಾ ಅವರು ಹೂಮಾಲೆ ಹಾಕಿ ಗೌರವಿಸಿದರು.

ಪ್ರಸ್ತುತ ವರ್ಷವನ್ನು ಧರ್ಮಪ್ರಾಂತ್ಯವು ‘ಮಕ್ಕಳ ವರ್ಷ’ ಎಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಐದು ಮಕ್ಕಳಿರುವ ಕುಟುಂಬವೊಂದು ಬೈಬಲ್ ಮೆರವಣಿಗೆಯಲ್ಲಿ ಹೆಜ್ಜೆಹಾಕುವ ಮೂಲಕ ಮುಂದಿನ ಪೀಳಿಗೆಗೆ ನಂಬಿಕೆಯನ್ನು ಹಸ್ತಾಂತರಿಸುವ ಸುಂದರ ಸಂದೇಶವನ್ನು ಸಾರಿತು. ಮೆರವಣಿಗೆಯ ಬಳಿಕ, ಮೊ. ಮ್ಯಾಕ್ಸಿಂ ನೊರೋನ್ಹಾ ಅವರು ಧರ್ಮಗುರುಗಳು ಮತ್ತು ಕಾರಿಸ್ಮಾತಿಕ್ ಸಂಚಲನದ ಮುಂದಾಳುಗಳೊಂದಿಗೆ ಅಧಿವೇಶನದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಪವಿತ್ರ ಬಲಿಪೂಜೆ ಹಾಗೂ ಸ್ತುತಿ-ಆರಾಧನೆ ಧ್ವಜಾರೋಹಣದ ನಂತರ, ಮೊ. ಮ್ಯಾಕ್ಸಿಂ ನೊರೋನ್ಹಾ ಅವರ ನೇತೃತ್ವದಲ್ಲಿ, ಇತರ ಧರ್ಮಗುರುಗಳ ಸಹ-ಕಾರ್ಮಿಕತ್ವದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಾಯಿತು. ಬೋಂದೆಲ್ ಚರ್ಚ್‌ನ ಗಾಯನ ಮಂಡಳಿಯು ಸುಮಧುರ ಗಾಯನದ ಮೂಲಕ ಬಲಿಪೂಜೆಗೆ ಮೆರುಗು ನೀಡಿತು. ಅಧಿವೇಶನದ ಸ್ತುತಿ ಮತ್ತು ಆರಾಧನಾ (Praise and Worship) ವಿಧಿಗಳನ್ನು ಬ್ರದರ್ ರೋನಿ ಡಿ’ಸೋಜಾ ಮತ್ತು ಅವರ ತಂಡವು ಭಕ್ತಿಭಾವದಿಂದ ಮುನ್ನಡೆಸಿತು.

ಆಧ್ಯಾತ್ಮಿಕ ಪ್ರವಚನ: ಸೃಷ್ಟಿಯಿಂದ ಶರೀರಧಾರಣೆಯವರೆಗೆ ಮೊದಲ ದಿನದ ವಿಷಯವಾದ “ಪ್ರಕಟಣೆ ಮತ್ತು ಶರೀರಧಾರಣೆ: ಮಾತನಾಡುವ ಮತ್ತು ರಕ್ಷಿಸುವ ದೇವರು” ಎಂಬುದರ ಕುರಿತು ವಿಶೇಷ ಪ್ರವಚನಗಳು ನಡೆದವು.

ಹಳೆ ಒಡಂಬಡಿಕೆಯ ಹಿನ್ನೆಲೆ: ಮಡಂತ್ಯಾರು ಚರ್ಚ್‌ನ ಧರ್ಮಗುರು ವಂದನೀಯ ಡಾ. ಸ್ಟ್ಯಾನಿ ಗೋವಿಯಸ್ ಅವರು “ದೇವರ ವಾಕ್ಯದ ಸೃಜನಶೀಲ ಶಕ್ತಿ” ಎಂಬ ವಿಷಯದ ಮೇಲೆ ಮಾತನಾಡಿ, ದೇವರು ತನ್ನ ವಾಕ್ಯದ ಮೂಲಕ ಸೃಷ್ಟಿಯನ್ನೆಲ್ಲ ಹೇಗೆ ಅಸ್ತಿತ್ವಕ್ಕೆ ತರುತ್ತಾನೆ ಮತ್ತು ತನ್ನ ಶಕ್ತಿಯನ್ನು ಹೇಗೆ ಪ್ರಕಟಪಡಿಸುತ್ತಾನೆ ಎಂಬುದನ್ನು ವಿವರಿಸಿದರು.

ಹೊಸ ಒಡಂಬಡಿಕೆಯ ಹಿನ್ನೆಲೆ: ಮುಲ್ಕಿಯ ಡಿವೈನ್ ಕಾಲ್ ಸೆಂಟರ್‌ನ ನಿರ್ದೇಶಕ ವಂದನೀಯ ಅನಿಲ್ ಕಿರಣ್ ಫೆರ್ನಾಂಡಿಸ್ (SVD) ಅವರು ಪ್ರವಚನ ನೀಡಿ, ಯೇಸುಕ್ರಿಸ್ತರು ಹೇಗೆ ದೇವರ ವಾಕ್ಯವಾಗಿ ಶರೀರಧಾರಿಯಾಗಿ ನಮ್ಮ ನಡುವೆ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಂತ್ಯದಲ್ಲಿ, ಬೆಜೈ ಚರ್ಚ್‌ನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು ದಿವ್ಯಸತ್ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು. “ನಾನು ಯುಗಾಂತ್ಯದವರೆಗೂ ಸದಾ ನಿಮ್ಮೊಡನೆ ಇರುತ್ತೇನೆ” ಎಂಬ ವಾಕ್ಯದ ಆಧಾರದ ಮೇಲೆ ನೆರೆದಿದ್ದ ಸಹಸ್ರಾರು ವಿಶ್ವಾಸಿಗಳನ್ನು ಪ್ರಾರ್ಥನೆಯಲ್ಲಿ ಮುನ್ನಡೆಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್‌ನ ಆಧ್ಯಾತ್ಮಿಕ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಆಯೋಗದ ಕಾರ್ಯದರ್ಶಿ ವಂ. ಡಾ. ವಿನ್ಸೆಂಟ್ ಸಿಕ್ವೇರಾ, ಮಂಗಳಜ್ಯೋತಿ ನಿರ್ದೇಶಕ ವಂ. ರೋಹಿತ್ ಡಿ’ಕೋಸ್ಟಾ, ಸಿಬಿಇ ಕಾರ್ಯದರ್ಶಿ ವಂ. ಡಾ. ಲಿಯೋ ಲಸ್ರಾದೋ, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂ. ಅನಿಲ್ ಇವಾನ್ ಫೆರ್ನಾಂಡಿಸ್ ಮತ್ತು ಸಿಒಡಿಪಿ ನಿರ್ದೇಶಕ ವಂ. ವಿನ್ಸೆಂಟ್ ಡಿ’ಸೋಜಾ ಉಪಸ್ಥಿತರಿದ್ದರು. ಲಾಯಿಕ್ ಮುಂದಾಳುಗಳಾದ ಸಂಚಾಲಕ ಶ್ರೀ ಡೊಲ್ಫಿ ಲೋಬೊ, ಬ್ರ. ಜೊಕಿಮ್ ಪಿಂಟೊ, ಸಿಸ್ಟರ್ ಮರ್ಸಿ ಮಿನೇಜಸ್, ಬ್ರ. ರೊನಾಲ್ಡ್ ಡಿ’ಸೋಜಾ ಮತ್ತು ಬ್ರ. ಎಲಿಯಾಸ್ ಕುವೆಲ್ಲೊ ಹಾಜರಿದ್ದರು.

ವಂದನೀಯ ರೋಹಿತ್ ಡಿ’ಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು. ಈ ಬೃಹತ್ ಅಧಿವೇಶನವು ಮಾರ್ಚ್ 1 ರವರೆಗೆ ಪ್ರತಿದಿನ ಸಂಜೆ 4:00 ರಿಂದ 8:30 ರವರೆಗೆ ನಡೆಯಲಿದೆ.