ಮಂಗಳೂರು: ಸರಕು ಸಾಗಾಟದ ಹಡಗಿನಲ್ಲಿ ಅಗ್ನಿ ಅವಘಡ ಉಂಟಾಗಿರುವಂತಹ ಘಟನೆ ಗೋವಾ ಕಡಲ ಕಿನಾರೆಯ ಅರಬ್ಬಿ ಸಮುದ್ರದಲ್ಲಿ ಜುಲೈ 20ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸತತ 40 ಗಂಟೆಯ ಕಾರ್ಯಾಚರಣೆ ಬಳಿಕ ಹೆಲಿಕಾಪ್ಟರ್ ಮತ್ತು ರಕ್ಷಣಾ ಹಡಗಿನ ಮೂಲಕ ಇಂಡಿಯನ್ ಕೋಸ್ಟ್​ ಗಾರ್ಡ್​ನಿಂದ ಬೆಂಕಿ ನಂದಿಸಲಾಗಿದೆ. ಹಡಗನ್ನು ಮಂಗಳೂರು ಕಡಲ ಕಿನಾರೆಗೆ ತಂದು ನಿಲ್ಲಿಸಲಾಗಿದೆ. ಗುಜರಾತ್​ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೋಗೆ ಹಡಗು ಹೊರಟಿದ್ದ ವೇಳೆ ಅವಘಡ ಸಂಭವಿಸಿತ್ತು.

ಲಂಗರು ಹಾಕಿರುವ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವದ ಜೊತೆ ಹಡಗು‌ ಮುಳುಗುವ ಆತಂಕ ಉಂಟಾಗಿದೆ. ಆದರೆ ಇದರಿಂದ ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಮತ್ತು ಸಂಭಾವ್ಯ ಅವಘಡ ಎದುರಿಸಲು ಸಿದ್ದ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.