ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿ ಪರಿಷತ್ತಿನ 2026–27ನೇ ಸಾಲಿನ ಉದ್ಘಾಟನಾ ಸಮಾರಂಭವು 24ನೇ ಮೇ 2026ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಆಡಿಟೋರಿಯಂನಲ್ಲಿ ನೆರವೇರಿತು.

ಈ ಕಾರ್ಯಕ್ರಮವು ಹಿಂದಿನ ಹಾಗೂ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಮೆರವಣಿಗೆಯೊಂದಿಗೆ ಆರಂಭವಾಯಿತು. ಶ್ರೇಯಾ ಹಾಗೂ ತಂಡದವರಿಂದ ಪ್ರಾರ್ಥನಾ ಗೀತೆಯಲ್ಲಿ ಸರ್ವಶಕ್ತನ ಆಶೀರ್ವಾದವನ್ನು ಕೋರುವ ಮೂಲಕ ಔಪಚಾರಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ವಿದ್ಯಾರ್ಥಿ ಪರಿಷತ್ತಿನ ಸಿಬ್ಬಂದಿ ಸಲಹೆಗಾರರಾದ ಡಾ. ದೀಪಾ ಪಾಯಸ್ ರವರು ಸಭೆಯನ್ನು ಸ್ವಾಗತಿಸಿ, ಮುಖ್ಯ ಅತಿಥಿಗಳಾದ Daijiworld.com ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ ಶ್ರೀ ವಾಲ್ಟರ್ ನಂದಳಿಕೆ ಅವರನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಡಾ. ಇ. ಎಸ್. ಜೆ. ಪ್ರಭು ಕಿರಣ್ ರವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಹಿಂದಿನ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ಜೀಶಾನ್ ಹಾವೇರಿ ಅವರು ಕಾಲೇಜಿನ ಧ್ವಜವನ್ನು ನೂತನ ಅಧ್ಯಕ್ಷೆ ಪೂಜಾ ಪಿ ಅವರಿಗೆ ಹಸ್ತಾಂತರಿಸಿದರು. ನಂತರ ಹಿಂದಿನ ಪದಾಧಿಕಾರಿಗಳಿಂದ ಹೊಸ ಪದಾಧಿಕಾರಿಗಳಿಗೆ ಜವಾಬ್ದಾರಿಗಳ ಹಸ್ತಾಂತರ ನಡೆಯಿತು. ಲಿಂಗಪ್ರಸಾದ್ (ಉಪಾಧ್ಯಕ್ಷ), ಬೈಯ್ಯ ಶೀಲಾ ಜಾಯ್ (ಪ್ರಧಾನ ಕಾರ್ಯದರ್ಶಿ), ರಾಹುಲ್ ಕುಮಾರ್ ಬಸಪ್ಪ ಕೆ. (ಜಂಟಿ ಕಾರ್ಯದರ್ಶಿ), ಯಾದವ್ ದಿಶಾ ಚಂದ್ರಶೇಖರ್ (ಮ್ಯಾಗಜಿನ್ ಕಾರ್ಯದರ್ಶಿ), ಸಯ್ಯದ್ ಫಲಾಹ್ ಮೊಹಿದ್ದೀನ್ (ಕ್ರೀಡಾ ಕಾರ್ಯದರ್ಶಿ), ಚೈತ್ರಾ ತಂಗರಾಜ್ ಶೆಟ್ಟಿ (ಸಾಂಸ್ಕೃತಿಕ ಕಾರ್ಯದರ್ಶಿ), ಅನಿಲ್ ಕುಮಾರ್ (ಸಂಶೋಧನಾ ಕಾರ್ಯದರ್ಶಿ) ಹಾಗೂ ಜೋನಿಟಾ ಬಿ. ಮಚಾಡೊ (ಮಾಧ್ಯಮ ಕಾರ್ಯದರ್ಶಿ) ಇವರುಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಸ್ವೀಕರಿಸಿದರು.

ಪ್ರಾಂಶುಪಾಲರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಅವರನ್ನು ಅಭಿನಂದಿಸಿ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು. ನಂತರ ಗಣ್ಯರು ಹಾಗೂ ನೂತನ ಅಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿಯವರು ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿ ಪರಿಷತ್ತಿನ ಅಧಿಕೃತ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳು ನಿರ್ಗಮಿತ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸ್ಮರಣಿಕೆಯ ಮೂಲಕ ಗೌರವಿಸಿದರು.

ಹಿಂದಿನ ಅಧ್ಯಕ್ಷರಾದ ಜೀಶಾನ್ ಹಾವೇರಿ ಅವರು ವಿದಾಯ ಭಾಷಣ ಮಾಡಿದರು. ಬಳಿಕ ನೂತನ ಅಧ್ಯಕ್ಷೆ ಪೂಜಾ ಪಿ ಅವರು ಸ್ವೀಕಾರ ಭಾಷಣ ಮಾಡುತ್ತಾ, “ನಾಯಕತ್ವವೆಂದರೆ ಕೇವಲ ಅಧಿಕಾರದಲ್ಲಿರುವುದಲ್ಲ, ಎಲ್ಲರ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುವುದಾಗಿದೆ” ಎಂದು ಹೇಳಿದರು.

ಎಫ್.ಎಂ.ಎಚ್.ಎಂ.ಸಿ.ಎಚ್. ಹಾಗೂ ಎಫ್.ಎಂ.ಸಿ.ಒ.ಪಿ.ಎಸ್. ಆಡಳಿತಾಧಿಕಾರಿಗಳಾದ ರೆವ. ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾರವರು ನೂತನ ಸದಸ್ಯರನ್ನು ಅಭಿನಂದಿಸಿ, ನಿರ್ಗಮಿತ ವಿದ್ಯಾರ್ಥಿ ಪರಿಷತ್ತಿನ ಸೇವೆ, ನಾಯಕತ್ವ ಮತ್ತು ವಿವಿಧ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಧನ್ಯವಾದ ಸಲ್ಲಿಸಿದರು. “ಒಬ್ಬ ನಾಯಕ ಮೊದಲು ತನ್ನನ್ನು ತಾನೇ ಮುನ್ನಡೆಸಬಲ್ಲವನಾಗಿರಬೇಕು, ತಂಡಕ್ಕಾಗಿ ದುಡಿಯಬೇಕು ಮತ್ತು ಸಹಾನುಭೂತಿ ಹೊಂದಿರಬೇಕು” ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾದ ಶ್ರೀ ವಾಲ್ಟರ್ ನಂದಳಿಕೆ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನೂತನ ವಿದ್ಯಾರ್ಥಿ ಪರಿಷತ್ತಿಗೆ ಅಭಿನಂದನೆ ಸಲ್ಲಿಸಿದರು. ಎಫ್.ಎಂ.ಎಚ್.ಎಂ.ಸಿ.ಯ 40 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯ ಆಯ್ಕೆಯಾಗಿರುವುದನ್ನು ಅವರು ಸಂತೋಷದಿಂದ ಉಲ್ಲೇಖಿಸಿದರು. “ಇಂದಿನ ಯುವಕರು ನಾಳೆಯ ನಾಯಕರು ಮಾತ್ರವಲ್ಲ, ಇಂದಿನ ನಾಯಕರೂ ಆಗಿದ್ದಾರೆ. ನಾಯಕತ್ವಕ್ಕೆ ಅನುಮತಿಯ ನಿರೀಕ್ಷೆ ಬೇಡ; ನಾಯಕನಾದವನು ಮತ್ತೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲವನಾಗಿದ್ದಾನೆ ಎಂದು ಅವರು ಹೇಳಿದರು. ವೈದ್ಯಕೀಯ ವೃತ್ತಿಯ ಮಹತ್ವವನ್ನು ಒತ್ತಿ ಹೇಳುತ್ತಾ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಆರೋಗ್ಯ ಸೇವೆಯ ಹೃದಯವಾಗಿರುವ ಕರುಣೆ, ಸಹಾನುಭೂತಿ ಮತ್ತು ಮಾನವೀಯ ಸ್ಪರ್ಶವನ್ನು ಅದು ಎಂದಿಗೂ ಬದಲಾಯಿಸಲಾರದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಿಗೆ ಫಾದರ್ ಮುಲ್ಲರ್ ಚಾರಿಟಬಲ್ ಇನ್ಸ್ಟಿಟ್ಯೂಷನ್ಸ್‌ನ ನಿರ್ದೇಶಕರಾದ ರೆವ. ಫಾ. ಫಾಸ್ಟಿನ್ ಲೂಕಾಸ್ ಲೋಬೊ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೆವ. ಫಾ. ಫಾಸ್ಟಿನ್ ಲೂಕಾಸ್ ಲೋಬೊ ಅವರು ನೂತನ ಹಾಗೂ ನಿರ್ಗಮಿತ ವಿದ್ಯಾರ್ಥಿ ಪರಿಷತ್ತಿನ ಸದಸ್ಯರನ್ನು ಅಭಿನಂದಿಸಿದರು. “ನಾಯಕನು ದಾರಿಯನ್ನು ತಿಳಿದಿರುತ್ತಾನೆ, ಅದೇ ದಾರಿಯಲ್ಲಿ ಸಾಗುತ್ತಾನೆ ಮತ್ತು ಇತರರಿಗೂ ದಾರಿ ತೋರಿಸುತ್ತಾನೆ” ಎಂಬ ಮಾತನ್ನು ಉಲ್ಲೇಖಿಸಿ, ಪರಿಣಾಮಕಾರಿ ನಾಯಕತ್ವಕ್ಕೆ ಉತ್ತಮ ಸಂವಹನ ಕೌಶಲ್ಯ, ದೃಢ ನೈತಿಕ ಮೌಲ್ಯಗಳು ಹಾಗೂ ಸ್ಪಷ್ಟ ದೃಷ್ಟಿಕೋನ ಅಗತ್ಯವೆಂದು ತಿಳಿಸಿದರು. ಸಂಸ್ಥೆ ಮತ್ತು ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು, ಉನ್ನತ ಗುರಿಗಳನ್ನು ಹೊಂದಿ ಅವುಗಳನ್ನು ಸಾಧಿಸಲು ಶ್ರಮಿಸಬೇಕು ಎಂದು ವಿದ್ಯಾರ್ಥಿ ನಾಯಕರಿಗೆ ಸಲಹೆ ನೀಡಿದರು.

ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ನ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಧೀರಾಜ್ ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನವಾಡ ಯು.ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬೈಯ್ಯ ಶೀಲಾ ಜಾಯ್ ಅವರು ವಂದನಾರ್ಪಣೆ ಸಲ್ಲಿಸಿದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶ್ರೀಮತಿ ಹಿಮಾ ಎಸ್. ಅಕ್ಬರ್ ಮತ್ತು ಪ್ರಣವ ಎಂ.ಎಸ್. ಕಾರ್ಯಕ್ರಮದ ನಿರೂಪಣೆ ಮಾಡಿದರು.