ಮಂಗಳೂರು: ನಗರದ ಪಡೀಲ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಪುತ್ತೂರುತಾಲೂಕು ಬೆಳ್ಳಿಪ್ಪಾಡಿ ಗ್ರಾಮದ (ವಯಾ ದಾರಂದಕುಕ್ಕು) ಕೊಡಿಮರ ನಿವಾಸಿ ವಿಶ್ವನಾಥ ಪೂಜಾರಿ ಅವರ ಪುತ್ರ ಧನರಾಜ್ (23) ಯಾನೆ ಧನು ಮೃತಪಟ್ಟ ದುರ್ದೈವಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಧನರಾಜ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಊರಿಗೆ ಬಂದಿದ್ದರು. ಜಾತ್ರಾ ಗದ್ದೆಯಲ್ಲಿ (ಸಂತೆ ಗದ್ದೆ) ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಅವರು, ನಿನ್ನೆ ಮುರದಲ್ಲಿ ತನ್ನ ಗೆಳೆಯನ ಮನೆಯಲ್ಲಿ ತಂಗಿದ್ದರು. ಇಂದು ಬಟ್ಟೆ ಬದಲಾಯಿಸಿ ಮತ್ತೆ ಸ್ಟಾಲ್ ಗೆ ಹೋಗಲು ಬೆಳಿಗ್ಗೆ ಸುಮಾರು 11:30ಕ್ಕೆ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತ: ದೊರೆತಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಧನರಾಜ್ ಚಲಾಯಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು ಲೈಟ್ ಕಂಬಕ್ಕೆ ಅಪ್ಪಳಿಸಿ. ಬಳಿಕ ಎದುರಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನದ ಮೇಲೆ ಹಾರಿದೆ. ಡಿಕ್ಕಿಯ ತೀವ್ರತೆಗೆ ಧನರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸವಾರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವಿಶ್ವನಾಥ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದುಡಿಯುವ ಕೈಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಜಾತ್ರೆಯ ಸಂಭ್ರಮದಲ್ಲಿದ್ದ ಪುತ್ತೂರು ಸುತ್ತಮುತ್ತ ಈ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

View this post on Instagram

A post shared by News Karnataka (@newskarnataka)