ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಾಗೂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ ‘ನವಹಸಜ ಸಮುದಾಯ ಸಂಘಟನೆ” ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ನಕಲಿ ಗುರುತಿನ ಚೀಟಿ ಪಡೆದವರ ವಿರುದ್ಧ ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, “ಮೂಲತಃ ರಾಯಚೂರಿನ ಅನಿ ಮಂಗಳೂರು ಎಂಬಾಕೆ ಕಳೆದ 4-5 ವರ್ಷಗಳಿಂದ ಮಂಗಳೂರಿನಲ್ಲಿದ್ದಾಳೆ. ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಮೈಸೂರಿನ ಅಪರಿಚಿತ ವ್ಯಕ್ತಿಯೊಬ್ಬನನ್ನು ಮಂಗಳೂರಿಗೆ ಕರೆಸಿಕೊಂಡಿದ್ದಾಳೆ. ಸಂಘಟನೆಗೆ ಯಾವುದೇ ಮಾಹಿತಿ ನೀಡದೆ, ಆ ವ್ಯಕ್ತಿಗೆ ಮಂಗಳೂರಿನ ವಿಳಾಸದಲ್ಲಿ ನಕಲಿ ಆಧಾರ ಕಾರ್ಡ್ ಹಾಗೂ ಮಹಿಳಾ ಅಭಿವೃದ್ಧಿ ನಿಗಮಕ್ಕೆ ತಪ್ಪು ಮಾಹಿತಿ ನೀಡಿ ರಾಷ್ಟ್ರೀಯ ಟ್ರಾನ್ಸ್ಜೆಂಡರ್ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾಳೆ. ಆ ವ್ಯಕ್ತಿ ಈಗ ಮೈಸೂರಿಗೆ ಓಡಿ ಹೋಗಿ, ಮಂಗಳೂರಿನ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾನೆ. ಈ ವಿಚಾರಕ್ಕೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ,” ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ 50 ಮಂದಿಗೆ ಟಿಜಿ ಕಾರ್ಡ್ ಸಿಕ್ಕಿರುವುದು ತಿಳಿದುಬಂದಿದೆ. ಅದರಲ್ಲಿ ಅನೇಕ ಕಾರ್ಡ್ಗಳು ನಕಲಿಯಾಗಿವೆ (Fake) ಎಂಬ ಸಂಶಯ ನಮಗಿದೆ. ಹೆಣ್ಣೂ ಅಲ್ಲದ, ಗಂಡೂ ಅಲ್ಲದ ಅನಿಶ್ಚಿತತೆಯಲ್ಲಿರುವ ನೈಜ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ಸುಲಭವಾಗಿ ಹಣ ಗಳಿಸಲು ಭಿಕ್ಷಾಟನೆಗೆ ಇಳಿಯುವ ಉದ್ದೇಶದಿಂದ ನಕಲಿ ಕಾರ್ಡ್ಗಳನ್ನು ಮಾಡಿಸಲಾಗುತ್ತಿದೆ. ಡಿಸಿಯವರು ಈ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದೊಂದಿಗೆ ಕುಳಿತು ವೆರಿಫಿಕೇಶನ್ ಮಾಡಲು ಸೂಚಿಸಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ತನಿಖೆಯಾಗಿ ಶಿಕ್ಷೆಯಾಗಬೇಕು,” ಎಂದರು.
“ಮಂಗಳೂರಿನಲ್ಲಿ ಮೊದಲು ಸ್ಥಳೀಯರು ಮಾತ್ರ ಇದ್ದರು. ಆದರೆ ಈಗ ಹೊರ ಜಿಲ್ಲೆಯವರು ಮತ್ತು ಹಿಂದಿ ಭಾಷಿಕರು ಹೆಚ್ಚಾಗಿದ್ದಾರೆ. ಭಿಕ್ಷಾಟನೆ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ತಿಳಿದು, ಸಮುದಾಯದ ವೇಷ ಹಾಕಿ ಸಿಗ್ನಲ್ಗಳಲ್ಲಿ ನಿಲ್ಲುತ್ತಿದ್ದಾರೆ. ಇವರಿಗೆ ಒಬ್ಬ ‘ಗುರು’ ಇದ್ದು ಒಂದು ತಂಡವಾಗಿ ನಡೆಸುತ್ತಿದ್ದಾರೆ. ಕೆಲವರು ಬೈ ಸೆಕ್ಸುವಲ್ ಆಗಿದ್ದು, ಹೆಂಡತಿ ಮಕ್ಕಳಿದ್ದರೂ ಟಿಜಿ ಕಾರ್ಡ್ ಪಡೆದಿದ್ದಾರೆ. ಇಂತಹವರಿಂದ ನೈಜ ಮಂಗಳಮುಖಿಯರಿಗೆ ತೊಂದರೆಯಾಗುತ್ತಿದೆ. ನಾವು ಕಲೆಕ್ಷನ್ಗೆ ಹೋಗುವುದನ್ನು ನಿಲ್ಲಿಸಿದ್ದೇವೆ, ಆದರೆ ಈ ನಕಲಿ ಗ್ಯಾಂಗ್ಗಳಿಂದಾಗಿ ನಮಗೆ ಸಮಾಜದಲ್ಲಿ ಕೆಟ್ಟ ಹೆಸರು ಬರುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಿ ನಮ್ಮ ಸಂಘಟನೆಯ ಬೋರ್ಡ್ ಮೆಂಬರ್ ಆಗಿದ್ದರೂ, ನಂಜನಗೂಡಿನ ವ್ಯಕ್ತಿಗೆ ಐಡಿ ಮಾಡಿಸಿಕೊಟ್ಟ ಬಗ್ಗೆ ನಮಗೆ ಮಾಹಿತಿ ಮುಚ್ಚಿಟ್ಟಿದ್ದಾಳೆ. ಆಕೆಯ ಅಕ್ರಮಕ್ಕೆ ಸಾಥ್ ನೀಡಿದವರು ಯಾರು ಎಂಬುದು ತನಿಖೆಯಾಗಬೇಕು. ಅಷ್ಟೇ ಅಲ್ಲದೆ, ಐಡಿ ಕಾರ್ಡ್ ಕಳೆದುಹೋಗಿದೆ ಎಂದು ಆಕೆ ಸುಳ್ಳು ಹೇಳುತ್ತಿದ್ದಾಳೆ; ಕಳೆದುಹೋಗಿದ್ದರೆ ದೂರು ನೀಡಬೇಕಿತ್ತಲ್ಲವೇ? ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯ ಬಲಿಯಾಗಬಾರದು. ದಕ್ಷಿಣ ಕನ್ನಡ ಜಿಲ್ಲೆಯ ನೈಜ ಮಂಗಳಮುಖಿಯರಿಗೆ ಮಾತ್ರ ನ್ಯಾಯ ಸಿಗಬೇಕು,” ಎಂದು ನಿಖಿಲಾ ಅವರು ತಮ್ಮ ಆಗ್ರಹವನ್ನು ಮಂಡಿಸಿದರು.

