ಮಂಗಳೂರು: ನಿನ್ನೆ ತಾನೇ ವಿಶ್ವದಾದ್ಯಂತ ಪರಿಸರ ದಿನವನ್ನು ಆಚರಿಸಿದ್ದೇವೆ. ಆದರೆ ಬುದ್ಧಿವಂತರ ಜಿಲ್ಲೆ ಎಂದು ಹೊಗಳಿಸಿಕೊಳ್ಳುವ ದ.ಕ.ಜಿಲ್ಲೆಯ ಮಂಗಳೂರಿನಲ್ಲಿ ವಿಶ್ವ ಪರಿಸರ ದಿನದ ಸ್ವಲ್ಪ ದಿನಗಳೊಗಿಂತ ಮೊದಲೇ ಪರಿಸರದ್ರೋಹಿಯೊಬ್ಬ ನೆಟ್ಟ ಗಿಡಗಳನ್ನೇ ರಾತ್ರೋರಾತ್ರಿ ಕಿತ್ತೊಯ್ದ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ನಂತೂರು ಬಳಿಯ ಆಳ್ವಾರಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪರಿಸರಪ್ರೇಮಿ, ವನ ಚ್ಯಾರಿಟೇಬಲ್ ಟ್ರಸ್ಟ್ ರೂವಾರಿ ಜೀತ್ ಮಿಲನ್ ರೋಚ್ ಅವರು ಆಳ್ವಾರಿಸ್ ರಸ್ತೆಯಲ್ಲಿರುವ ಫ್ಲ್ಯಾಟ್ ನವರ ರಸ್ತೆಬದಿಯಲ್ಲಿ ಮೇ 24ರಂದು ಸುಮಾರು 15ರಷ್ಟು ಗಿಡಗಳನ್ನು ನೆಟ್ಟಿದ್ದರು.

ಆದರೆ ಮೇ 26ರಂದು ರಾತ್ರಿ 11.30 ಸುಮಾರಿಗೆ ಆಗಂತುಕನೊಬ್ಬ ನೆಟ್ಟ ಗಿಡಗಳನ್ನು ಕಿತ್ತು ಬೇರಿನಲ್ಲಿದ್ದ ಮಣ್ಣನ್ನು ನೆಲಕ್ಕೆ ಕೊಡವಿ ಕದ್ದೊಯ್ದು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ. ಈ ದೃಶ್ಯ ಅಲ್ಲಿನ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.