ಸುರತ್ಕಲ್: ಭಾರಿ ಮಳೆಯಿಂದಾಗಿ ಹೊಂಡಗುಂಡಿ ಬಿದ್ದಿರುವ ಸುರತ್ಕಲ್-ನಂತೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತುರ್ತು ದುರಸ್ತಿ ಕಾಮಗಾರಿ ಆರಂಭಗೊಂಡಿದೆ.

ಅಧಿಕೃತವಾಗಿ ಈ ದುರಸ್ತಿ ಕಾಮಗಾರಿ ಆಗಸ್ಟ್ 7ರಿಂದ 13ರವರೆಗೆ ನಡೆಸಲು ನಿರ್ಧರಿಸಲಾಗಿದೆಯಾದರೂ ಗುತ್ತಿಗೆದಾರರು ಮುತುವರ್ಜಿ ವಹಿಸಿ ಬುಧವಾರ ರಾತ್ರಿಯಿಂದಲೇ ಕಾಮಗಾರಿ ಆರಂಭಿಸಿದ್ದಾರೆ.

ಈ ಕಾಮಗಾರಿ ಪ್ರತಿ ದಿನ ಬೆಳಗ್ಗೆ 11ರಿಂದ 3 ಗಂಟೆಯವರೆಗೆ ವಾಹನ ದಟ್ಟಣೆ ಇಲ್ಲದ ಸಮಯ ನೋಡಿ ನಡೆಯಲಿದೆ ಮತ್ತು ರಾತ್ರಿ ವೇಳೆ ನಡೆಸಲಾಗುತ್ತದೆ ಎಂದು ಎನ್ ಎಚ್‌ಐಎ ಯೋಜನ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಜಿ ಪ್ರಕಟನೆಯಲ್ಲಿ ತಿಳಿಸಿದ್ದರು.

ಗುತ್ತಿಗೆದಾರ ಸಂಸ್ಥೆಯು ಬುಧವಾರ ರಾತ್ರಿ ಕೂಳೂರಿನಿಂದ ಕಾಮಗಾರಿಯನ್ನು ಆರಂಭಿಸಿದೆ. ಹಳೆಯ ಸೇತುವೆಯ ಮೇಲಿನ ಗುಂಡಿ ಮುಚ್ಚುವ ಕೆಲಸವನ್ನು ರಾತ್ರಿಯೇ ಮುಗಿಸಿದ ಬಳಿಕ ಬೆಳಗ್ಗೆ ಹೊಸ ಸೇತುವೆಯ ದುರಸ್ತಿ ನಡೆಸಿದರು. ಇದೀಗ ಎರಡೂ ಸೇತುವೆಗಳು ಮತ್ತು ಅದನ್ನು ಸಂಪರ್ಕಿಸುವ ರಸ್ತೆ ಹೊಂಡಮುಕ್ತಗೊಂಡಿದೆ.

ಈಗ ನಡೆಯುತ್ತಿರುವುದು ರಸ್ತೆ ಗುಂಡಿ ಗಳನ್ನು ಮುಚ್ಚುವ, ತೇಪೆ ಹಾಕುವ ಕಾರ್ಯವೇ ಹೊರತು ಮುಕ್ಕದಿಂದ ನಂತೂರುವರೆಗೆ ಸಂಪೂರ್ಣ ಮರು ಡಾಮರೀಕರಣ ಕಾಮಗಾರಿಯ ಭಾಗವಲ್ಲ ಎಂದು ತಿಳಿದುಬಂದಿದೆ. ಮುಕ್ಕದಿಂದ ನಂತೂರುವರೆಗಿನ ಹೆದ್ದಾರಿಯ ಮೇಲ್ಪದರವನ್ನು ಕಿತ್ತು ಹೊಸ ಡಾಮರು ಹಾಕುವ 28.30 ಕೋಟಿ ರೂ. ವೆಚ್ಚದ ಕಾಮಗಾರಿ ಹೆದ್ದಾರಿ ಇಲಾಖೆಯಿಂದ ಮೇ ತಿಂಗಳಲ್ಲಿ ಆರಂಭಗೊಂಡಿತ್ತು.

ಆದರೆ ಮುಕ್ಕದಿಂದ ಹೊಸಬೆಟ್ಟುವರೆಗೆ ಒಂದು ಪದರ ಡಾಮರೀಕರಣದ ಹೊತ್ತಿಗೆ ಮಳೆ ಬಂದಿತ್ತು. ಹೀಗಾಗಿ ಆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಅದನ್ನು ಸೆಪ್ಟಂಬರ್ ಇಲ್ಲವೇ ಅಕ್ಟೋಬರ್‌ನಲ್ಲಿ ಮರು ಆರಂಭ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಹೆದ್ದಾರಿ ರಿಪೇರಿ ಸಂಬಂಧ ಗುಂಡಿಗಳನ್ನು ಮುಚ್ಚುವುದು, ತೇಪೆ ಕಾರ್ಯ, ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ತಾತ್ಕಾಲಿಕ ಮಾರ್ಗ ಬದಲಿಸುವ ಸಾಧ್ಯತೆ ಇದೆ. ಈ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಎದುರಾಗುವ ಸಾಧ್ಯತೆ ಇದ್ದು ವಾಹನ ಸವಾರರು, ಹಾಲಿ ನಡೆಯುತ್ತಿರುವ ಕಾಮಗಾರಿಗೆ ಕೋಲ್ಡ್ ಪ್ರಸ್ ತಂತ್ರಜ್ಞಾನ ಬಳಸಲಾಗಿದ್ದು, ಒಂದು ವೇಳೆ ಮಳೆ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ, ಎಂದು ಮೂಲಗಳು ತಿಳಿಸಿವೆ. ಮುಂದಿನ ಎಲ್ಲ ರಾತ್ರಿಗಳಲ್ಲಿ ವೇಗವಾಗಿ ಕಾಮಗಾರಿ ನಡೆಯಲಿದೆ. ಶನಿವಾರ, ರವಿವಾರ ವಾಹನ ದಟ್ಟಣೆ ಕಡಿಮೆ ಇರುವಾಗ ಹೆಚ್ಚಿನ ಕೆಲಸ ನಡೆಯಲಿದೆ ಎಂದು ತಿಳಿದು ಬಂದಿದೆ.