ಮಂಗಳೂರು : ಮುಂಬೈನಿಂದ ಮಂಗಳೂರಿಗೆ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರಿನ ಚಿರಾಗ್ ಸನಿಲ್, ಆಲ್ವಿನ್ ಕ್ಲಿಂಟನ್ ಡಿ ಸೋಜಾ,ಜನನ್ @ ಜನನ್ ಜಗನ್ನಾಥ, ರಾಜೇಶ್ ಬಂಗೇರ @ ಅಚ್ಚು @ ರಕ್ಷಿತ್, ವರುಣ್ ಗಾಣಿಗ ಮತ್ತು ಕೇರಳದ ಅಬ್ದುಲ್ ಕರೀಂ ಇ.ಕೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ರೂ. 22,30,000/- ಮೌಲ್ಯದ 111.83 ಗ್ರಾಂ ಎಂಡಿಎಂಎ ಮತ್ತು ರೂ. 1,90.000/- ಮೌಲ್ಯದ 21.03 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ ದಿನಾಂಕ: 21-09-2025 ರಂದು ಬೆಳಿಗ್ಗೆ ದಾಳಿ ನಡೆಸಿ ಸ್ಕೂಟರ್ ನಲ್ಲಿ ಇಬ್ಬರು ಯುವಕರು ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಪತ್ತೆಯಾಗಿದ್ದು, ಪರಾರಿಯಾಗಲು ಪ್ರಯತ್ನಿಸಿದ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಾವೂರಿನ ವಾಸಿಗಳಾದ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ ಸೋಜಾ ಎಂದು ತಿಳಿದುಬಂದಿದ್ದು,
ಅವರಿಂದ ರೂ. 22,30,000/- ಮೌಲ್ಯದ 111.83 ಗ್ರಾಂ ಎಂಡಿಎಂಎ ಅನ್ನು ವಶಪಡಿಸಲಾಯಿತು. ಈ ಬಗ್ಗೆ ಮಾದಕ ವಸ್ತು ದೊರೆತ ಮೂಲದ ಬಗ್ಗೆ ವಿಚಾರಿಸಲಾಗಿ ಕೇರಳದ ಅಬ್ದುಲ್ ಕರೀಂ ಎಂಬಾತನು ನೀಡಿದ ಹಣದಿಂದ ಮುಂಬೈಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಖರೀದಿ ಮಾಡಿ ತಂದಿರುವ ಬಗ್ಗೆ ತಿಳಿದು ಬಂದಿರುತ್ತದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 143/2025 U/S 8(C), 21(C), 22(C) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ಮಾದಕ ವಸ್ತು ಖರೀದಿಸಲು ಹಣವನ್ನು ನೀಡಿದ ಅಬ್ದುಲ್ ಕರೀಂ ಇ.ಕೆ ಎಂಬಾತನನ್ನು ದಿನಾಂಕ: 22.09.2025 ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ದಸ್ತಗಿರಿ ಮಾಡಲಾಯಿತು.
ಸದರಿ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ ತಾವುಗಳು ತಮ್ಮ ಬಳಿ ಇದ್ದ ಕೊಕೇನ್ ಮಾದಕ ವಸ್ತುಗಳನ್ನು ಈಗಾಗಲೇ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರು ಸದರಿ ವ್ಯಕ್ತಿಗಳ ಮಾಹಿತಿ ಪಡೆದು ದಿನಾಂಕ: 21-09-2025 ರಂದು ರಾತ್ರಿ 8.45 ಗಂಟೆಗೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ಮೂರು ಸ್ಕೂಟರ್ಗಳಲ್ಲಿ ನಿಂತುಕೊಂಡಿದ್ದವರ ಮೇಲೆ ದಾಳಿ ಮಾಡಿದಾಗ ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದ್ದು,
ಅವರಿಂದ ಸುಮಾರು 21.03 ಗ್ರಾಂ ಕೊಕೇನ್ ಮೌಲ್ಯ ರೂ. 1,90.000/- ವನ್ನು ಸ್ವಾದೀನಪಡಿಸಿಕೊಡಿದ್ದು, ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಜನನ್ @ ಜನನ್ ಜಗನ್ನಾಥ, ರಾಜೇಶ್ ಬಂಗೇರ, ಮತ್ತು ವರುಣ್ ಗಾಣಿಗ ರವರನ್ನು ವಶಕ್ಕೆ ಪಡೆದು ದೂರು ನೀಡಿದ ಮೇರೆಗೆ (ಒಟ್ಟು 5 ಜನ ಆರೋಪಿಗಳ ಮೇಲೆ) ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 97/2025 ಕಲಂ 8(C), 22(b) NDPS ACT ಮತ್ತು ಕಲಂ3(5) B.N.S ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾದ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ರೀತಿ ಎಲ್ಲಾ ಪ್ರಕರಣಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿದ ಜಾಲ, ಮಾದಕ ವಸ್ತುಗಳನ್ನು ಉಪಯೋಗಿಸುವ ವ್ಯಕ್ತಿಗಳ ಮತ್ತು ಪೆಡ್ಲರ್ಗಳ ಬಗ್ಗೆ ತನಿಖೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

