ಮಂಗಳೂರು: ನಗರದ ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಮೂಲತಃ ಬೀದರ್‌ನ ಪ್ರಸಕ್ತ ಕೋಡಿಪಾಳ್ಯ ನಿವಾಸಿ ಪ್ರಜ್ವಲ್ ಪೀಣ್ಯಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಪೂರೈಕೆಗೆ ಸಂಬಂಧಿಸಿದಂತೆ ಈಗಾಗಲೆ ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿತ್ತು. ಪ್ರಜ್ವಲ್ ಪೀಣ್ಯಾಸ್‌ನನ್ನು ಬಂಧಿಸುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಿದಂತಾಗಿದೆ.

ಈತ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಮಾದಕ ವಸ್ತುವನ್ನು ಪಡೆದುಕೊಂಡು ನಗರಕ್ಕೆ ಪೂರೈಕೆ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈತನಿಂದ ಕೃತ್ಯಕ್ಕೆ ಬಳಸಿದ 1 ಮೊಬೈಲ್ ಫೋನ್ ವಶಪಡಿಸಲಾಗಿದೆ. ಆರೋಪಿಯು ಈ ಹಿಂದೆ ನಗರದ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು, ಈತನ ವಿರುದ್ಧ ಈಗಾಗಲೆ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.