ಮಂಗಳೂರು: ಕರಾವಳಿಯಲ್ಲಿ ಡ್ರಗ್ಸ್ ಮಾಫಿಯಾ ಹಾವಳಿ ಹೆಚ್ಚಾಗುತ್ತಿದೆ, ಈ ಕುರಿತು ಈಗಾಗಲೇ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಡ್ರಗ್ಸ್ ದಂಧೆ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಈ ಬಾರಿಯ ವಿಧಾನಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಬಂಡಾರಿ ಹೇಳಿಕೆ ನೀಡಿದ್ದಾರೆ.

ಡ್ರಗ್ಸ್ ದಂಧೆಯಲ್ಲಿ ತೊಡಗಿದವರನ್ನು ಬಂಧಿಸಿದ್ದರೂ ಅವರು ಜಾಮೀನು ಪಡೆದು ಹೊರಗೆ ಬರುತ್ತಾರೆ. ಮತ್ತೆ ಅದೇ ಡ್ರಗ್ಸ್ ದಂಧೆ ಮಾಡುತ್ತಿರುವುದು ಕಂಡು ಬಂದಿದೆ. ಡ್ರಗ್ಸ್ ದಂಧೆಗೆ ಬಹಳ ಸಣ್ಣ ಕೇಸ್‌ಗಳು ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜಾರಿಯಾಗಬೇಕಾದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಸಾಧ್ಯ.

ಅವಿಭಜಿತ ದ.ಕ.ಜಿಲ್ಲೆಯಲ್ಲಿನ ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆದಿದ್ದೆ, ಗೃಹಮಂತ್ರಿ, ಐಜಿ, ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದೆ, ಡ್ರಗ್ಸ್ ದಂಧೆಯ ಕರಾಳತೆ ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ ಇಲ್ಲಿನ ಕಾಲೇಜುಗಳಲ್ಲಿ ಅಡ್ಮಿಷನ್ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ಡ್ರಗ್ಸ್ ದಂಧೆಯನ್ನು‌ ಡಿಜಿಯವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.