ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ವಿಜಯದಶಮಿ ಸಂಭ್ರಮ ಮೇಲೈಸಿತ್ತು. ಶರನ್ನವರಾತ್ರಿ ಸಂಪನ್ನಗೊಂಡ ವಿಜಯೋತ್ಸವದ ದಿನವಾಗಿ ವಿಜಯದಶಮಿ ಆಚರಿಸಲಾಯಿತು.

ಉಷಾಕಾಲ ಪೂಜೆ, ನಿತ್ಯಪೂಜೆ, ನವಕ ಕಲಶಾಭಿಷೇಕ ನೆರವೇರಿತು. ಬಳಿಕ ದೇವಳದ ನಾಗನಟ್ಟಿಯಲ್ಲಿ ಧಾನ್ಯ ಲಕ್ಷ್ಮಿ ಪೂಜೆ, ವಿವಿಧ ಬಿರುದಾವಳಿಗಳೊಂದಿಗೆ ಸನ್ನಿಧಾನಕ್ಕೆ ಹೊಸ ತೆನೆಯ ಆಗಮನವಾಯಿತು. ಬಳಿಕ ಶ್ರೀ ದೇವಿಯ ಚರಣಾರವಿಂದಗಳಲ್ಲಿ ಹೊಸ ತೆನೆಗೆ ಪೂಜೆ ನೆರವೇರಿಸಿ ಭಕ್ತಿಗೆ ತೆನೆ ವಿತರಿಸಲಾಯಿತು.

ವಿಜಯದಶಮಿ ಹಿನ್ನೆಲೆಯಲ್ಲಿ ರತ್ನ ಖಚಿತ ಕಿರೀಟ ಸ್ವರ್ಣಾಭರಣ ಭೂಷಣ ಪೀತಾಂಬರಗಳಿಂದ ಅಲಂಕೃತಳಾಗಿ ಶಂಖ ಚಕ್ರಗಳನ್ನು ಹಿಡಿದು ತ್ರಿಶೂಲ ಧಾರಿಣಿಯಾಗಿ ಎಳೆ ತನೆಯನ್ನು ಅಭಯ ಹಸ್ತದಲ್ಲಿ ಧರಿಸಿದ ‘ಅನ್ನಪೂರ್ಣೇಶ್ವರಿ’ಯ ಅಲಂಕಾರವನ್ನು ಮಂಗಳಾದೇವಿಗೆ ಮಾಡಲಾಗಿತ್ತು.