ಮಂಗಳೂರು : ಕಿನ್ನಿಗೋಳಿ ಸಮೀಪದ ದಾಮಸ್‌ ಕಟ್ಟೆ ಕೊಲ್ಬೆಟ್ಟು ವೃದ್ಧ ದಂಪತಿಗಳಾದ ಬೆನೆಡಿಕ್ಟ್ ಫರ್ನಾಂಡಿಸ್‌ ಹಾಗೂ ಲಿಲ್ಲಿ ಫರ್ನಾಂಡಿಸ್‌ ಅವರಿಗೆ ಮುಂಬಯಿ ಪೊಲೀಸರೆಂದು ಹೇಳಿ ವಂಚಕರು ಸೋಮವಾರ ಸಂಜೆ ಆನ್‌ಲೈನ್‌ ಮೂಲಕ ಬೆದರಿಕೆ ಹಾಕಿದ್ದರು. ಮುಂಬಯಿನಲ್ಲಿ ಬ್ಯಾಂಕ್‌ ಅಕೌಂಟ್‌ನಿಂದ ನೀವು ಆರು ಕೋಟಿ ರೂಪಾಯಿ ಡ್ರಾ ಮಾಡಿದ್ದೀರಿ ಎಂದು ಸುಳ್ಳು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಡಿಜಿಟಲ್‌ ಅರೆಸ್ಟ್‌ ಬೆದರಿಕೆ ಹಾಕಿದ್ದರು. ಆದರೆ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಮೂಲ್ಕಿ ಪೊಲೀಸರ ತುರ್ತು ಕಾರ್ಯಾಚರಣೆಯಿಂದ ವಂಚನೆಗೊಳಗಾಗುವುದು ತಪ್ಪಿದೆ.

ಕಿನ್ನಿಗೋಳಿ ಸಮೀಪದ ದಾಮಸ್‌ ಕಟ್ಟೆ ಕೊಲ್ಬೆಟ್ಟು ವೃದ್ಧ ದಂಪತಿಗಳಾದ ಬೆನೆಡಿಕ್ಟ್ ಫರ್ನಾಂಡಿಸ್‌ (86) ಹಾಗೂ ಲಿಲ್ಲಿ ಫರ್ನಾಂಡಿಸ್‌ (71) ಅವರಿಗೆ ಮುಂಬಯಿ ಪೊಲೀಸರೆಂದು ಹೇಳಿ ವಂಚಕರು ಸೋಮವಾರ ಸಂಜೆ 5.30ಕ್ಕೆ ಆನ್‌ಲೈನ್‌ ಮೂಲಕ ಬೆದರಿಕೆ ಹಾಕಿದ್ದರು. ಮುಂಬಯಿನಲ್ಲಿ ಬ್ಯಾಂಕ್‌ ಅಕೌಂಟ್‌ನಿಂದ ನೀವು ಆರು ಕೋಟಿ ಡ್ರಾ ಮಾಡಿದ್ದೀರಿ ಎಂದು ಸುಳ್ಳು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಡಿಜಿಟಲ್‌ ಅರೆಸ್ಟ್‌ ಬೆದರಿಕೆ ಹಾಕಿದ್ದರು.

ಬಳಿಕ ವಂಚಕರು ನೀವು ಮನೆಯಿಂದ ಹೊರಗೆ ಬರಬೇಡಿ, ಹೊರಗೆ ಬಂದರೆ ನಮ್ಮ ಸಿಬ್ಬಂದಿ ನಿಮ್ಮನ್ನು ಶೂಟ್‌ ಮಾಡುತ್ತಾರೆ. ಕೂಡಲೇ ನಮಗೆ ಹಣ ನೀಡಬೇಕು ಎಂದು ಬೆದರಿಸಿದ್ದಾರೆ. ಕಿನ್ನಿಗೋಳಿಯ ಕೆನರಾ ಬ್ಯಾಂಕ್‌ನ ಖಾತೆಯಲ್ಲಿದ್ದ 84 ಲಕ್ಷ ರೂ. ತಕ್ಷಣ ತಮ್ಮ ಖಾತೆಗೆ ವರ್ಗಾಯಿಸುವಂತೆ ಸೂಚನೆ ನೀಡಿದ್ದರು.

ವಂಚಕರ ಬೆದರಿಕೆಗೆ ಮಣಿದ ದಂಪತಿ ಮಂಗಳವಾರ ಕಿನ್ನಿಗೋಳಿ ಕೆನರಾ ಬ್ಯಾಂಕ್‌ ಮ್ಯಾನೇಜರ್‌ ರಾಯಿಸ್ಟನ್‌ ಆಳ್ವ ಅವರನ್ನು ಸಂಪರ್ಕಿಸಿ, ನಮ್ಮ ಫಿಕ್ಸೆಡ್‌ ಖಾತೆಯಲ್ಲಿದ್ದ 84 ಲಕ್ಷ ರೂ.ವನ್ನು ಸೇವಿಂಗ್ಸ್‌ ಅಕೌಂಟ್‌ಗೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ. ಆಗ ಬ್ಯಾಂಕ್‌ ಮ್ಯಾನೇಜರ್‌ಗೆ ಸಂಶಯ ಬಂದು ಯಾಕೆ ಎಂದು ಕೇಳಿದಾಗ ದಂಪತಿ ಬೆಂಗಳೂರಿನಲ್ಲಿ ಜಾಗ ಖರೀದಿ ಮಾಡಲು ಇದೆ ಎಂಬ ಹಾರಿಕೆಯ ಉತ್ತರ ನೀಡಿದ್ದರು.

ಬುಧವಾರ ಬೆಳಗ್ಗೆ ದಂಪತಿ ಬ್ಯಾಂಕ್‌ ಮ್ಯಾನೇಜರ್‌ಗೆ ಮತ್ತಷ್ಟು ಒತ್ತಡ ಹೇರಿ ತಮ್ಮ ಬ್ಯಾಂಕ್‌ ಖಾತೆಯಿಂದ ಸುಮಾರು 84 ಲಕ್ಷ ರೂ.ತೆಗೆದು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ. ದಂಪತಿಯ ಈ ನಡೆಯಿಂದ ಬ್ಯಾಂಕ್‌ ಮ್ಯಾನೇಜರ್‌ಗೆ ಮತ್ತಷ್ಟು ಸಂಶಯ ಬಂದಿದ್ದು, ಕೂಡಲೇ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂಲ್ಕಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ದಂಪತಿಗಳ ಮನೆಗೆ ಧಾವಿಸಿದ್ದು, ಮನೆಯ ಒಳಗಡೆ ಪರಿಶೀಲಿಸಿದಾಗ ಡಿಜಿಟಲ್‌ ಅರೆಸ್ಟ್‌ ಕೃತ್ಯ ಬಯಲಿಗೆ ಬಂದಿದೆ. ದಂಪತಿ ತಮಗೆ ವಂಚಕರಿಂದ ಬಂದ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಹಾಗೂ ಬ್ಯಾಂಕ್‌ ಮ್ಯಾನೇಜರ್‌ ಕಾರ್ಯಾಚರಣೆ ನಡೆಸಿ ವಂಚಕರ ಖಾತೆಗೆ ವರ್ಗಾವಣೆಗೊಂಡ 84 ಲಕ್ಷ ರೂ. ತಡೆಹಿಡಿದಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಸೂಚನೆ ಮೇರೆಗೆ ಮೂಲ್ಕಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಬಿ. ಎಸ್‌. ಹಾಗೂ ಸಿಬ್ಬಂದಿ ಸಹಕರಿಸಿದ್ದರು.