ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ನ. 15 ರಿಂದ 19ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಲಕ್ಷದೀಪೋತ್ಸವದಲ್ಲಿ ಪ್ರತೀದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನ. 15ರಂದು ಬೆಳಗ್ಗೆ 9.30ಕ್ಕೆ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.
ಮೊದಲ ದಿನ ಹೊಸಕಟ್ಟೆ ಉತ್ಸವ, ನ. 16ರಂದು ಕೆರೆ ಕಟ್ಟೆ ಉತ್ಸವ, 17ರಂದು ಲಲಿತೋದ್ಯಾನ ಉತ್ಸವ ನಡೆಯಲಿದ್ದು, ನ. 18ರಂದು ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವ ಡಾ| ಎಂ.ಬಿ. ಪಾಟೀಲ್ ಸರ್ವಧರ್ಮ ಸಮ್ಮೇಳನದ ಅಧೀವೇಶನ ಉದ್ಘಾಟಿಸಲಿದ್ದು, ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಎ. ಸೂರ್ಯಪ್ರಕಾಶ್ ಪಂಡಿತ್ ಮತ್ತು ಖ್ಯಾತ ಅಂಕಣಕಾರ ತನ್ನೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಗಂಟೆ 8.30ರಿಂದ ಚೆನ್ನೈ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ವಿದುಷಿ ಡಾ| ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ.
19ರಂದು ಸಂಜೆ 5ಕ್ಕೆ ಸಾಹಿತ್ಯ ಸಮ್ಮೇಳನದ 93ನೇ ಅಧೀವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪ್ರೊ| ಪ್ರೇಮಶೇಖರ ಉದ್ಘಾಟಿಸಲಿದ್ದು, ಪತ್ರಕರ್ತ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಶಾಂತಾ ನಾಗಮಂಗಲ, ಡಾ| ರಘು ವಿ. ಮತ್ತು ಧಾರವಾಡದ ಸಾಹಿತಿ ಡಾ| ಬಿ.ಎಂ. ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 8.30ರಿಂದ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವಿದೆ. ರಾತ್ರಿ 9.45 ರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ರಾತ್ರಿ 12ರ ಬಳಿಕ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ. ನ. 20ರಂದು ಜಾವ ಲಕ್ಷದೀಪೋತ್ಸವ ಸಮಾಪನಗೊಳ್ಳಲಿದ್ದು, ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ದಿ ನಡೆಯಲಿದೆ.
ಉತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಕೆಎಸ್ ಆರ್‌ಟಿಸಿ ವಿಶೇಷ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಭಾಗಗಳಿಂದ ಚೆಂಡೆ, ಕೊಂಬು, ಕಹಳೆ, ವಾಲಗ, ನಾಗಸ್ವರ ಮೊದಲಾದ ಸಾವಿರಾರು ಕಲಾವಿದರು ರಾತ್ರಿ ಇಡೀ ಕಲಾಸೇವೆ ಮಾಡಲಿದ್ದಾರೆ.
ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತಿದ್ದು, ರಾತ್ರಿ ವೇಳೆ ದೇವಸ್ಥಾನವೂ ಸೇರಿದಂತೆ ಇಡೀ ಧರ್ಮಸ್ಥಳ ವಿದ್ಯುತ್ ಬೆಳಕಿನಿಂದ ಜಗಮಗಿಸಲಿದೆ. ವಿದ್ಯುತ್ ದೀಪಗಳ ಜತೆಗೆ ದೇವಸ್ಥಾನವನ್ನು ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗುತ್ತಿದ್ದು, ಧರ್ಮಸ್ಥಳ ಪರಿಸರ ವಿಶೇಷ ಸಂಪ್ರದಾಯಿಕ ಅಲಂಕರಿಸಲಾಗುತ್ತದೆ.

