ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿರುವ ಅನಾಮಿಕನ ವಿಚಾರಣೆ ಸೋಮವಾರವೂ ಎಸ್‌ಐಟಿ ತಂಡದಿಂದ ನಡೆಯಿತು. ದಿನವಿಡೀ ವಿಚಾರಣೆ ನಡೆಸಿ ಸಂಜೆ ವೇಳೆ ಆತನನ್ನು ಬಿಡಲಾಯಿತು.

ಅನಾಮಿಕ ತಿಳಿಸಿದ ಜಾಗದಲ್ಲೆಲ್ಲ ಶೋಧ ನಡೆಸಿದರೂ ಹೇಳಿಕೊಳ್ಳುವಂತಹ ಯಾವುದೇ ಕುರುಹುಗಳು ಸಿಗದೇ ಇರುವುದರಿಂದ ಈಗ ಸಹಜವಾಗಿಯೇ ಆತನ ನಡೆಯ ಮೇಲೆ ಸಂಶಯ ಮೂಡಿದೆ. ಸೋಮವಾರ ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳು ದಿನವಿಡೀ ಆತನ ವಿಚಾರಣೆ ನಡೆಸಿ ಹಲವು ವಿಷಯಗಳಿಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಅನಾಮಿಕ ತಪ್ರೊಪ್ಪಿಗೆ ?

ತಾನು ಬೇರೆಯರ ಸೂಚನೆಯಂತೆ ಈ ಆರೋಪ ಮಾಡಿದ್ದಾಗಿ, ತನಗೆ ಘಟನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ ಎಂಬುದು ಸಹಿತ ಹಲವು ಮಾಹಿತಿಯನ್ನು ಎಸ್‌ಐಟಿಗೆ ಅನಾಮಿಕ ನೀಡಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಎಸ್‌ಐಟಿ ಈ ಕುರಿತು ದೃಢಪಡಿಸಿಲ್ಲ.

ಕೊಳ್ಳೇಗಾಲ ಮೂಲದ ವ್ಯಕ್ತಿ ಎಂದು ಹೇಳಲಾದ ಅನಾಮಿಕನ ಮೂಲಗಳನ್ನು ಎಸ್‌ಐಟಿ ಪರಿಶೀಲಿಸಿದೆ. ಆತನ ಕುಟುಂಬ, ಆತನೊಂದಿಗೆ 2014ರ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದವರ ವಿವರ ಕಲೆಹಾಕಿದೆ ಎಂದು ತಿಳಿದುಬಂದಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಮಂಗಳವಾರ ಬೆಳ್ತಂಗಡಿಗೆ ಆಗಮಿಸಿ ಇದುವರೆಗೆ ನಡೆದಿರುವ ವಿಚಾರಣೆ, ತನಿಖೆ ಮತ್ತು ಶೋಧದ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಮುಂದೆ ಅನಾಮಿಕನನ್ನು ಎಸ್‌ಐಟಿ ಬಂಧಿಸಿ ವಿಚಾರಣೆಗೆ ಒಳಪಡಿಸುವುದೇ? ಮಂಪರು ಪರೀಕ್ಷೆಗೆ ಒಳಪಡಿಸುವುದೇ ಅಥವಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ನ್ಯಾಯಾಧೀಶರ ನಿರ್ದೇಶದಂತೆ ಮುಂದುವರಿಯುವುದೇ? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವ‌ರ್, ಯುಟ್ಯೂಬ‌ರ್ ಸಮೀರ್ ಇವರೆಲ್ಲರ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಗಲಿದೆ ಎಂಬ ವದಂತಿಯೂ ಹರಡಿದೆ.

ಕೆಲವು ವರ್ಷಗಳ ಹಿಂದೆ ನಡೆದ ಆನೆಮಾವುತ ಮತ್ತು ಆತನ ಸೋದರಿಯ ಹತ್ಯೆಯ ತನಿಖೆಯನ್ನು ಮತ್ತೆ ನಡೆಸುವಂತೆ ಆಗ್ರಹಿಸಿ ಅವರ ಮನೆಯವರು ಸೋಮವಾರ ಎಸ್‌ಐಟಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.