ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ನಡೆಸುತ್ತಿರುವ ತನಿಖೆ ಮುಂದುವರೆಯಲಿದ್ದು, ಆದರೆ ಶವ ಶೋಧಕ್ಕಾಗಿ ಗುಂಡಿ ಅಗೆಯುವ ಕಾರ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು 2025ರ ಜುಲೈ 3 ರಂದು ಒಬ್ಬ ವ್ಯಕ್ತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಅದರಂತೆ ಕೋರ್ಟಿನಲ್ಲೂ ಆ ವ್ಯಕ್ತಿಯಿಂದ ಹೇಳಿಕೆ ನೀಡಲಾಯಿತು. ಮ್ಯಾಜಿಸ್ಟ್ರೇಟ್ ಅವರು ತನಿಖೆಗೆ ಆದೇಶ ಮಾಡಿದರು. ಪೊಲೀಸರಿಂದ ತನಿಖೆ ಆರಂಭಿಸಲಾಯಿತು.

ಇದಾದ ನಂತರ ನಾನು, ಸಿಎಂ ಚರ್ಚಿಸಿದೆವು. ನಂತರ ಎಸ್‌ಐಟಿಗೆ ಆದೇಶ ಮಾಡಿದೆವು. ಅದಕ್ಕೆ ಏನೇನು ತನಿಖೆ ಮಾಡಬೇಕು ಅಂತ ಟರ್ಮ್ಸ್ ಆಫ್ ರೆಫರೆನ್ಸ್ ನಿಗದಿ ಮಾಡಿದ್ದೇವೆ. ಜು.19 ರಂದು ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ತಂಡದಿಂದ ಸೌಮ್ಯಲತಾ ಪತ್ರ ಬರೆದು ಬದಲಾವಣೆಗೆ ಕೋರಿದರು. ಅವರ ಬದಲಾವಣೆ ಆಗಿದೆ. ಧರ್ಮಸ್ಥಳ ಪೊಲೀಸರ ವ್ಯಾಪ್ತಿಯಲ್ಲಿ ಇದ್ದ ಕೇಸ್ ಎಸ್‌ಐಟಿಗೆ ಹೋಗುತ್ತೆ. ಎಸ್‌ಐಟಿಯವರು ಮತ್ತೆ ಆ ವ್ಯಕ್ತಿ ಕರೆದು ಹೇಳಿಕೆ ಪಡೆಯುತ್ತಾರೆ.

ಅದರಲ್ಲಿ ಎಲ್ಲೆಲ್ಲಿ ಶವ ಹೂತು ಹಾಕಿದ್ದ ಅಂತ ಹೇಳ್ತಾನೆ. ಆತ ಹೇಳಿದ ಪಾಯಿಂಟ್‌ಗಳ ಮ್ಯಾಪ್ ಹಾಕಿಕೊಳ್ತಾರೆ. ಅಸ್ಥಿಪಂಜರಗಳನ್ನು ತೆಗೆಯಲು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯುತ್ತದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಗುತ್ತದೆ. ಒಂದರಲ್ಲಿ ಅಸ್ಥಿಪಂಜರ ಸಿಗುತ್ತೆ, ಅದನ್ನು ಎಫ್‌ಎಸ್‌ಎಲ್‌ಗೆ ಕಳಿಸಿಕೊಡ್ತಾರೆ. ಎರಡನೇ ಜಾಗದಲ್ಲೂ ಒಂದಷ್ಟು ಮೂಳೆಗಳು ಸಿಗ್ತವೆ, ಅದನ್ನೂ ಎಫ್‌ಎಸ್‌ಎಲ್‌ಗೆ ಕಳಿಸ್ತಾರೆ ಎಂದು ಪರಮೇಶ್ವರ್ ವಿವರ ನೀಡಿದರು.

ಇನ್ನೊಂದಷ್ಟು ಕಡೆಯೂ ಮಣ್ಣು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ. ಅಸ್ಥಿಪಂಜರದ ಪರಿಶೀಲನೆ ಆಗಬೇಕು, ಸ್ಯಾಂಪಲ್‌ಗಳ ಅನಾಲಿಸಿಸ್ ಆಗಬೇಕು. ಆಗ ಮಾತ್ರ ತನಿಖೆ ಪ್ರಾರಂಭ ಆಗಿದೆ ಅಂತ ಹೇಳಬಹುದು. ಇನ್ನೂ ಎಫ್‌ಎಸ್‌ಎಲ್ ವರದಿ ಬಂದಿಲ್ಲ, ವರದಿ ಬಂದನಂತರ ಮುಂದಿನ ತನಿಖೆ. ಇಲ್ಲಿಯ ವರೆಗೆ ಆಗಿರೋದು ಉತ್ಖನನ ಅಷ್ಟೇ, ತನಿಖೆ ಅಲ್ಲ. ಇನ್ನು ಆ ವ್ಯಕ್ತಿ ನಿತ್ಯ ಬರ್ತಾನೆ ಹೋಗ್ತಾನೆ, ಯಾಕೆ ವಶಕ್ಕೆ ಪಡೆದಿಲ್ಲ ಅಂತ ವಿಪಕ್ಷದವರು ಪ್ರಶ್ನೆ ಮಾಡಿದ್ದಾರೆ. ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್ನಂತೆ ಕ್ರಮವಹಿಸಲಾಗಿದೆ.

ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್ ಪ್ರಕಾರ ನಡೆದುಕೊಂಡಿದ್ದೇವೆ. ಹಾಗಾಗಿ ಬಂಧಿಸಿಲ್ಲ. ಪಾರದರ್ಶಕ ತನಿಖೆ, ಯಾರ ಒತ್ತಡಕ್ಕೂ ಮಣಿಯದೇ, ಯಾರ ಮಧ್ಯಪ್ರವೇಶ ಇಲ್ಲದೇ ತನಿಖೆ ನಡೀತಿದೆ. ಇನ್ನೂ ಎಷ್ಟು ಅಗೆಯುತ್ತೀರಿ ಅಂತ ಹಲವರು ಕೇಳ್ತಿದ್ದಾರೆ. ಮುಂದೆಯೂ ಗುಂಡಿ ಅಗೆಯಬೇಕಾ ಬೇಡವಾ ಅಂತ ಸರ್ಕಾರ ತೀರ್ಮಾನ ಮಾಡಲ್ಲ, ಎಸ್‌ಐಟಿ ತೀರ್ಮಾನ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.