ಮಂಗಳೂರು : ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಧರಣಿ, ಪ್ರತಿಭಟನೆಗಳಿಗೆ ನಿಯಮಗಳನ್ನು ಮೀರಿ ಅನಧಿಕೃತ ನಿರ್ಬಂಧ ಹೇರುವ, ಹೋರಾಟಗಾರರ ಮೇಲೆ ದುರುದ್ದೇಶದಿಂದ ಎಫ್‌ಐಆರ್ ಹಾಕುತ್ತಿರುವ ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಅನುಪಮ್ ಅಗ್ರವಾಲ್ ರನ್ನು ಅಮಾನತುಗೊಳಿಸಬೇಕು.

ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ತನಿಖೆ ಕೈಗೊಳ್ಳಬೇಕು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿ ಡಿ.23ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಪ್ರಕಟನೆಯಲ್ಲಿ ತಿಳಿಸಿದೆ.

ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ ಒಂದು ಗಂಟೆಯ ವರಗೆ ದಲಿತ, ರೈತ, ಕಾರ್ಮಿಕ. ಮಹಿಳಾ, ಯುವಜನ ಸಂಘಟನೆಗಳೂ ಒಳಗೊಂಡು ಇಪ್ಪತ್ತೈದಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಸಾಮೂಹಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಕಮಿಷನ‌ರ್ ಅಗ್ರವಾಲ್ ಜನಪರ ಸಂಘಟನೆಗಳು, ಜನ ಸಾಮಾನ್ಯರ ಬೇಡಿಕೆಗಳ ಮೇಲಿನ ಹೋರಾಟಗಳ ಕುರಿತು ಪೂರ್ವಾಗ್ರಹಗಳನ್ನು ಹೊಂದಿದ್ದಾರೆ, ತಿರಸ್ಕಾರ ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ನೆಪಗಳನ್ನು ಮುಂದಿಟ್ಟು ಧರಣಿ, ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಸರಕಾರದ ಯಾವುದೆ ಆದೇಶ ಇಲ್ಲದಿದ್ದರೂ ಧರಣಿ, ಪ್ರತಿಭಟನೆಗಳು ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಮಾತ್ರ ನಡೆಸಬೇಕು ಎಂದು ಸರ್ವಾಧಿಕಾರಿಯಂತೆ ಆದೇಶಿಸುತ್ತಿದ್ದಾರೆ.

ಧರಣಿ ನಿರತರ ಮೇಲೆ ಎಫ್‌ಐಆರ್ ಗಳನ್ನು ಹಾಕುತ್ತಿದ್ದಾರೆ. ಮತ್ತು ಇಂತಹ ನಿರ್ಬಂಧಗಳು, ನಿಷೇಧಗಳನ್ನು ಜನಪರ, ಜಾತ್ಯತೀತ ಸಂಘಟನೆಗಳಿಗಷ್ಟೆ ಸೀಮೀತಗೊಳಿಸುತ್ತಿದ್ದಾರೆ. ಬಲಪಂಥೀಯ ಸಂಘಟನೆಗಳಿಗೆ ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸದೆ ಬಹಿರಂಗ ತಾರತಮ್ಯ ಅನುಸರಿಸುತ್ತಿದ್ದಾರೆ. ಇದಲ್ಲದೆ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ಜೂಜು, ಗ್ಯಾಂಬ್ಲಿಂಗ್ ಗಳಿಗೆ ಮುಕ್ತ ಅವಕಾಶ ಒದಗಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.