ಮಂಗಳೂರು: ಕುಡುಪು ಬಳಿ ಅನುಮಾನಸ್ಪದವಾಗಿ ಮೃತದೇಹ ಪತ್ತೆ ಪ್ರಕರಣ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಕುಡುಪು ದೇವಸ್ಥಾನ ಬಳಿ ಕ್ರಿಕೆಟ್ ಟೂರ್ನಮೆಂಟ್ ಆಗುತಿತ್ತು. ಈ ವೇಳೆ ಮೂವತ್ತೈದರ ಹರೆಯದ ವ್ಯಕ್ತಿ ಒಬ್ಬ ಅಲ್ಲಿ ಹೋಗಿದ್ದ. ಅಲ್ಲಿ ಒಂದು ಮಾತಿಗೆ ವ್ಯಕ್ತಿ ಮತ್ತು ಗುಂಪಿನ ನಡುವೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆಯಾಗಿದೆ ಎಂದರು.

ಸೂಕ್ಷ್ಮ ಭಾಗದಲ್ಲಿ ಬಲವಾದ ಪೆಟ್ಟು ಬಿದ್ದು ಸಾವುಗೀಡಾಗಿದ್ದಾನೆ. ಪ್ರಾರಂಭದಲ್ಲಿ ಸಚಿನ್ ಎಂಬಾತನ ಜೊತೆ ಈ ವ್ಯಕ್ತಿಯ ಗಲಾಟೆಯಾಗಿದೆ. ಈ ವೇಳೆ ಅಲ್ಲಿದ್ದವರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮೂವತ್ತು ಮಂದಿಗೂ ಅಧಿಕ ಜನರು ಹಲ್ಲೆ ಮಾಡಿದ್ದಾರೆ. 15 ಜನರನ್ನು ವಶಕ್ಕೆ ಪಡೆದಿದ್ದೇವೆ, ಮೂವತ್ತು ಜನರನ್ನು ಗುರುತಿಸಿದ್ದೇವೆ. ಸಚಿನ್, ದೇವದಾಸ್, ಮಂಜುನಾಥ್ ಸೇರಿದಂತೆ ಹದಿನೈದು ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ಪ್ರಮುಖ ಆರೋಪಿ ಸಚಿನ್ ಆಟೋ ಡ್ರೈವರ್ ಆಗಿದ್ದಾನೆ. ಈ ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ನ ಗಂಡ ರವೀಂದ್ರ ನಾಯಕ್ ಎಂಬುವವರು ಇರುವ ಮಾಹಿತಿ‌ ಇದೆ. ಐದು ಮಂದಿಗೂ ಅಧಿಕ ಜನ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಿಲ್ಲ ಎಂದರು.

ಉತ್ತರ ಭಾರತ ಅಥವಾ ಕೇರಳ ಮೂಲದ ವ್ಯಕ್ತಿಯಾಗಿರುವ ಶಂಕೆ ಇದೆ ಎಂದು ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.