ಮಂಗಳೂರು : ಕೋಟ್ಯಂತರ ರೂ. ವ್ಯವಹಾರ ಕೇಂದ್ರ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಮೂರನೇ ಹಂತದ ವಿಸ್ತರಣೆ ಜತೆಗೆ ಹಾಲಿ 1 ಮತ್ತು 2ನೇ ಹಂತದ ಜೆಟ್ಟಿಯನ್ನು ಮೇಲ್ದರ್ಜೆಗೇರಿಸುವ 37.50 ಕೋ.ರೂ. ವೆಚ್ಚದ ಕಾಮಗಾರಿ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.

ಕೇಂದ್ರ ಸರ್ಕಾರದ ಮತ್ತ್ವ ನಂಪದ ಯೋಜನೆಯಲ್ಲಿ ಜೆಟ್ಟಿಯು 1, 2ನೇ ಹಂತದಲ್ಲಿ ಆಧುನೀಕರಣ ಕಾಮಗಾರಿಗೆ ವರ್ಷದ ಹಿಂದೆಯೇ 37.50 ಕೋ.ರೂ. ಯೋಜನೆ ಅನುಮೋದನೆಗೊಂಡಿದೆ. ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಮತ್ತು ಸಿಆರ್‌ಝಡ್ ಅನುಮತಿ ಲಭಿಸುವಲ್ಲಿ ವಿಳಂಬವಾದ ಕಾರಣ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕು.

ಸುಮಾರು 300 ಮೀ.ನಷ್ಟು ಇರುವ ಈಗಿನ ಹಳೇ ಜೆಟ್ಟಿಯ ಕೆಲವು ಭಾಗ ಅಲ್ಲಲ್ಲಿ ಕುಸಿಯುತ್ತಿದೆ. ಇದರ ಮರು ನಿರ್ಮಾಣವೇ ಈ ಯೋಜನೆಯ ಮುಖ್ಯ ಆದ್ಯತೆ ಉಳಿದಂತೆ ಕುಡಿಯುವ ನೀರಿನ ಬೃಹತ್ ಟ್ಯಾಂಕ್, ಮೊದಲ ಹಾಗೂ 2ನೇ ಜೆಟ್ಟಿಯಲ್ಲಿ ಹರಾಜು ಕೇಂದ್ರದ ಮರು ನಿರ್ಮಾಣ, ಮೀನುಗಾರಿಕೆ ಇಲಾಖೆಯ ಕಚೇರಿ ಕಟ್ಟಡ, ಶೌಚಾಲಯ, ಪ್ರವೇಶ ದ್ವಾರ ಅಭಿವೃದ್ಧಿ, ವಿದ್ಯುದೀಕರಣ, ಸಿಸಿಟಿವಿ, ಸೋಲಾರ್ ಲೈಟಿಂಗ್, ಚರಂಡಿ, ಒಳಚರಂಡಿ ವ್ಯವಸ್ಥೆ ದುರಸ್ತಿ ಸಹಿತ ವಿವಿಧ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ.

ದಕ್ಕೆಯ 3ನೇ ಹಂತದ ವಿಸ್ತರಣೆಯಡಿ 49.50 ಕೋ.ರೂ.ಗಳ ಉಳಿಕೆ ಕಾಮಗಾರಿ ಹಾಗೂ 1 ಹಾಗೂ 2ನೇ ದಕ್ಕೆ 37.50 ಕೋ.ರೂ.ಗಳಲ್ಲಿ ಆಧುನೀಕರಣ ಕಾಮಗಾರಿ ಮುಂದಿನ ತಿಂಗಳುಗಳಲ್ಲಿ ಹಂತ ಹಂತವಾಗಿ ಆರಂಭವಾಗಲಿದೆ. ಕಾಮಗಾರಿ ಸಂದರ್ಭ ಮೀನುಗಾರಿಕೆ ಬೋಟ್‌ಗಳ ನಿಲುಗಡೆ ಅಥವಾ ಮೀನು ಲೋಡಿಂಗ್ ಪ್ರಕ್ರಿಯೆಗೆ ಇಲ್ಲಿ ಸಮಸ್ಯೆ ಆಗಲಿದೆ. ಹೀಗಾಗಿ 2 ಯೋಜನೆಗಳು ಮುಕ್ತಾಯಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಮೀನುಗಾರಿಕೆ ಬಂದರಿನ ಪಕ್ಕದಲ್ಲಿರುವ ಬಂದರು ಇಲಾಖೆಯ ವಾಣಿಜ್ಯ ದಕ್ಕೆಯ ಕನಿಷ್ಠ 200 ಮೀ ಉದ್ದ ಜೆಟ್ಟಿಯನ್ನು ಮೀನುಗಾರಿಕೆ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರ ಪಡೆಯುವ ಪ್ರಸ್ತಾಪವು ಸರ್ಕಾರದ ಮಟ್ಟದಲ್ಲಿದೆ.

ಮೊದಲ ಹಂತದ ಜೆಟ್ಟಿ ನಿರ್ಮಾಣ 1986ರಲ್ಲಿ ಆರಂಭಗೊಂಡು 1991ರಲ್ಲಿ ಪೂರ್ಣಗೊಂಡಿತ್ತು. 147.80 ಲಕ್ಷ ರೂ. ಗಳಲ್ಲಿ 138 ಮೀ. ಉದ್ದದ ಜೆಟ್ಟಿ 675 ಚ.ಮೀ. ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ನಿರ್ಮಿಸಲಾಗಿದೆ. ಆಗ 300ರಿಂದ 350 ಸಂಖ್ಯೆಯ 30 ಅಡಿಯಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಇದ್ದವು ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ 2ನೇ ಹಂತದ ವಿಸ್ತರಣೆ 2003ರಿಂದ 2004ರ ನಡುವೆ ನಡೆಯಿತು. 144.67 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ 67 ಮೀ. ಉದ್ದದ ಜೆಟ್ಟಿಯಾಗಿದೆ.