ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯ ಆಟದ ಮೈದಾನದಲ್ಲಿ ಅನಾಮಿಕ ವ್ಯಕ್ತಿಗಳು ನಿರ್ಮಿಸಿದ ಗುಂಡಿ ಇದೀಗ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಿರ್ಮಾಣವಾದ ಬೃಹತ್ ಆಳದ ಗುಂಡಿ ಶಾಲಾ ಮಕ್ಕಳಿಗೆ ಅಪಾಯ ಕಾದಿದೆ ಎಂಬ ಆಘಾತಕಾರಿ ಸುದ್ದಿ ಪೋಷಕರಿಗೆ ಭಯ ಹುಟ್ಟಿಸಿದೆ.
ಶಾಲೆಯ ಶಿಕ್ಷಕ ವೃಂದ ಮತ್ತು ಶಾಲಾಭಿವೃದ್ದಿ ಸಮಿತಿಯ ಗಮನಕ್ಕೆ ಬಾರದೆ ಶಾಲೆಗೆ ಸಂಬಂಧಿಸಿದ ಆಟದ ಮೈದಾನದಲ್ಲಿ ಬೃಹತ್ ಹೊಂಡ ನಿರ್ಮಾಣ ಮಾಡಿದ ಶಂಕಿತ ವ್ಯಕ್ತಿಗಳ ಮೇಲೆ ಅನುಮಾಗಳು ಹುಟ್ಟಿಕೊಂಡಿದೆ. ಶಾಲೆಯಿಂದ ಸುಮಾರು ದೂರದಲ್ಲಿ ಆಟದ ಮೈದಾನವಿದ್ದು, ಇದರ ನಾಲ್ಕು ಸುತ್ತಲೂ ಅನೇಕ ಮನೆಗಳಿವೆ. ಆದರೆ ಯಾರೊಬ್ಬರ ಗಮನಕ್ಕೆ ಬರದೆ ಮೈದಾನದ ಮಧ್ಯ ಭಾಗದಲ್ಲಿ ಗುಂಡಿ ತೋಡಿದ್ದಾದರೂ ಯಾಕೆ? ಎಂಬ ಪ್ರಶ್ನೆ ನಿಗೂಢವಾಗಿದೆ.
ಕುಡಿಯುವ ನೀರಿನ ಸರಬರಾಜು ಪೈಪ್ ಅಳವಡಿಕೆಗೆ ಮಾಡಿರಬಹುದೇ ಎಂದು ಪುರಸಭೆ ಮತ್ತು ಬೃಹತ್ ಕುಡಿಯುವ ನೀರಿನ ಸರಬರಾಜು ಇಲಾಖೆಗೆ ಕೇಳಿದಾಗ ಅವರು ಗುಂಡಿ ನಿರ್ಮಿಸಿಲ್ಲ ಎಂದು ಉತ್ತರಿಸಿದ್ದಾರೆ. ಸರಕಾರಿ ಶಾಲೆಗೆ ಸೇರಿದ ಈ ಆಟದ ಮೈದಾನ ಸಾರ್ವಜನಿಕ ಮೈದಾನವಾಗಿ ಮಾರ್ಪಾಡು ಹೊಂದಿದೆ.
ಶಾಲೆಯ ಕಾರ್ಯಕ್ರಮವಲ್ಲದೆ ಸರಕಾರಿ ಕಾರ್ಯಕ್ರಮದ ಜೊತೆ ಖಾಸಗಿ ಎಲ್ಲಾ ಕಾರ್ಯಕ್ರಮಗಳು ಯಾರ ಭಯವಿಲ್ಲದೆ ನಡೆಯುವುದು ಕಂಡು ಬರುತ್ತಿದೆ. ವಾಹನ ತರಬೇತಿ ನೀಡುವ ವಾಹನಗಳಿಗೂ ಇದೇ ಮೈದಾನ ಉಚಿತವಾಗಿದೆ. ತ್ಯಾಜ್ಯದ ಜೊತೆ ಕಲ್ಲು ಮಣ್ಣು ಮರಳು ಹೀಗೆ ಎಲ್ಲವೂ ಇದೇ ಮೈದಾನದಲ್ಲಿ ರಾಶಿ ಬೀಳುತ್ತಿದೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಮಕ್ಕಳು ಆಟ ಆಡುವ ಮೈದಾನದಲ್ಲಿ ಗುಂಡಿಯನ್ನು ನಿರ್ಮಿಸಿ, ಅದರ ಮೇಲೆ ಮರದ ಗೆಲ್ಲುಗಳನ್ನು ಅಡ್ಡ ಇಡಲಾಗಿದೆ. ಆದರೆ ಆಟ ಆಡುವ ವೇಳೆ ವಿದ್ಯಾರ್ಥಿಗಳು ಗುಂಡಿಯೊಳಗೆ ಬೀಳುವ ಸಾಧ್ಯತೆ ಹೆಚ್ಚು ಇವೆ. ಜೊತೆಗೆ ಅಪಾಯಕಾರಿಯಾದ ಗುಂಡಿ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆ ಉಂಟು ಮಾಡಿದೆ.

