ಮಂಗಳೂರು : ಸ್ವಾತಂತ್ರ್ಯ ನಂತರ ದೇಶದಲ್ಲಿ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿದೆ, ಆದರೆ ಮುಸಲ್ಮಾನರಿಗೆ ಸೂಕ್ತ ಸ್ಥಾನ ನೀಡದೆ ತುಳಿಯುತ್ತಾ ಬರಲಾಗಿದ್ದು ಬಾಬರಿ ಮಸೀದಿ ಧ್ವಂಸ ಬಳಿಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು ಹನೀಫ್ ಖಾನ್ ಕೊಡಾಜೆ ಹೇಳಿದರು.

ಸಚಿವ ಸಂಪುಟದಲ್ಲಿ ಮುಸಲ್ಮಾನರು ಮತ್ತು ದಲಿತ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಸಮಾನ ಮನಸ್ಕರ ಒಕ್ಕೂಟದಿಂದ ನಿನ್ನೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಝಮೀರ್ ಅಹ್ಮದ್ ನಮ್ಮ ಸಮುದಾಯದ ಮಾಸ್ ಲೀಡರ್, ಅವರಿಗೆ ಮೊದಲೇ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತು. ಇದು ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳ ಆಗ್ರಹವೂ ಆಗಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭ ಝಮೀರ್ ಸಹಿತ ಐವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

1984ರಲ್ಲಿ 44 ಮುಸಲ್ಮಾನ ಸಂಸದರಿದ್ದರು. ಪ್ರಸ್ತುತ ದಿನಗಳಲ್ಲಿ ಮುಸಲ್ಮಾನರ ಪ್ರಾತಿನಿಧ್ಯ ಕ್ಷೀಣಿಸುತ್ತಾ ಬಂದಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ತೊರೆದು ಸಂಪೂರ್ಣವಾಗಿ ಕಾಂಗ್ರೆಸ್ ಜೊತೆ ನಿಂತಿದ್ದರು. ಆದರೆ ಡಿಕೆಶಿ ಸಚಿವ ಸಂಪುಟದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ತಲಾ ನಾಲ್ಕು ಹಾಗೂ ಕುರುಬ ಸಮುದಾಯಕ್ಕೆ ಎರಡು ಸ್ಥಾನ ನೀಡಲಾಗಿದೆ. ಆದರೆ ಆ ಸಮುದಾಯಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಮುಸಲ್ಮಾನರು ಬೆಂಬಲಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಚಕ್ಕೆ ನಿರಂತರ ಬೆಂಬಲ ನೀಡಿದರೂ ವಿವಿಧ ಕಾರಣಗಳನ್ನು ನೀಡಿ ಮುಸಲ್ಮಾನರನ್ನು ತುಳಿಯುವ ಕೆಲಸ ನಿರಂತರ ನಡೆದಿದೆ. ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತಾದರೂ ಈ ಹಿಂದೆ ನೀಡಿದ ಆರೋಗ್ಯ ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಪ್ರಕಾರ ಅದು ಮುಸ್ಲಿಂ ಸಮುದಾಯಕ್ಕೆ ನೀಡಿದ ಪ್ರಾತಿನಿಧ್ಯ ಅಲ್ಲ. ಇನ್ನೂ ನಾಲ್ಕು ಸಚಿವ ಸ್ಥಾನ‌ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 40 ಸ್ಥಾನಗಳಲ್ಲಿ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು. ಮುಸಲ್ಮಾನರಿಗೆ ಅನ್ಯಾಯ ಮಾಡಿದ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ.

ಬಾಬರಿ ಮಸೀದಿ ಧ್ವಂಸದ ಬಳಿಕ ಉತ್ತರ ಪ್ರದೇಶದಲ್ಲಿ ಸಂಪೂರ್ಣ ನಿರ್ನಾಮ ಆಗಿದ್ದು ಪ್ರಸ್ತುತ ರಾಹುಲ್ ಗಾಂಧಿಯವರಿಂದ ಸ್ವಲ್ಪ ಜೀವ ತಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಮುಸಲ್ಮಾನರು ಹೈಮಾಂಡ್ ಗೆ ಹೆದರಿ ಮಾತನಾಡುತ್ತಿಲ್ಲ. ಮಾತನಾಡಬೇಕಾದ ಸಂದರ್ಭದಲ್ಲಿ ಮಾತಾಡದಿದ್ದರೆ ಅದು ಗುಲಾಮಗಿರಿ ಆಗುತ್ತದೆ ಎಂದು ಹನೀಫ್ ಪ್ರತಿಪಾದಿಸಿದರು.

ಅಬ್ದುಲ್ ಸಲಾಂ ಉಚ್ಚಿಲ್ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ಐವರನ್ಜು ಸಚಿವರನ್ನಾಗಿ ಮಾಡಬೇಕಿತ್ತಾದರೂ ಒಬ್ಬರಿಗೆ ಮಾತ್ರ ನೀಡಲಾಗಿದೆ‌. ಸಚಿವ ಸಂಪುಟ ವಿಸ್ತರಣೆ ಸಂದರ್ಭ ನ್ಯಾಯ ನೀಡಬೇಕೆಂದರು. ಮುಖಂಡರಾದ ಲೋಲಾಕ್ಷ, ಸಿರಾಜ್ ಬಜ್ಪೆ, ಇಮ್ತಿಯಾಝ್ ಕೆದುಂಬಾಡಿ, ಇರ್ಷಾದ್ ಯು.ಟಿ., ಸಲೀಂ ಪರಂಗಿಪೇಟೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.