ಮಂಗಳೂರು : ಕೇಂದ್ರ ಸರ್ಕಾರಕ್ಕೆ ಮಹಿಳೆಯರ ಮೇಲೆ ಕಾಳಜಿ ಇರುತ್ತಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದಂತೆ ಶೇ.50 ಮೀಸಲಾತಿ ತರಬೇಕಿತ್ತು ಎಂದು ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಎಂದೂ ಮಹಿಳಾ ಮೀಸಲಾತಿಯ ವಿರೋಧಿಯಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ಜಾರಿ ಮಾಡಿದಾಗ ಬಿಜೆಪಿಯವರೇ ವಿರೋಧಿಸಿದ್ದರು. ಈಗ ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯೊಂದನ್ನೇ ಮಂಡನೆ ಮಾಡಿರುತ್ತಿದ್ದರೆ ಕಾಂಗ್ರೆಸ್‌ ಖಂಡಿತವಾಗಿಯೂ ಬೆಂಬಲ ನೀಡುತ್ತಿತ್ತು. ಆದರೆ ಇದರೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನೂ ಸೇರಿಸಿದ್ದರಿಂದ ಹಿಂದೇಟು ಆಗಿದೆ. ಮೀಸಲಾತಿ ಮಸೂದೆಯನ್ನೇ ಪ್ರತ್ಯೇಕವಾಗಿ ಮಂಡಿಸಲಿ ಎಂದು ಮಮತಾ ಗಟ್ಟಿ ಆಗ್ರಹಿಸಿದರು.

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ, ಮಹಿಳಾ ವಿರೋಧಿ ಎನ್ನುತ್ತಿದ್ದಾರೆ. ಆದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ಮಹಿಳೆಯರ ಏಳಿಗಾಗಿ ಕೆಲಸ ಮಾಡಿದ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಮಾತ್ರ. ಇಂದು ದೇಶಾದ್ಯಂತ ಲಕ್ಷಾಂತರ ಮಹಿಳೆಯರು ರಾಜಕೀಯದಲ್ಲಿ ಪ್ರಾತಿನಿಧ್ಯ ಪಡೆದಿದ್ದರೆ ಅದು ಕಾಂಗ್ರೆಸ್‌ ಸಾಧನೆ. ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲು ಬಿಜೆಪಿಗೆ ನೈತಿಕತೆಯಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ನಗರಾಧ್ಯಕ್ಷೆ ಅಪ್ಪಿ, ವೀಣಾ ಟೆಲ್ಲಿಸ್‌ ಮತ್ತಿತರರಿದ್ದರು.