ಬಂಟ್ವಾಳ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿಂದೂ ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಾಗೂ ಭ್ರಷ್ಟ ಮುಖ್ಯಮಂತ್ರಿಗಳ ವಿರುದ್ಧ ಶೀಘ್ರವೇ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಂಟ್ವಾಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಖಿ ನಿಗಮದ ಹಗರಣ, ಮೂಡಾ ಸೂಟು ಹಗರಣದ ಮುಖೇನ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ. ಇಂತಹಾ ಭ್ರಷ್ಟ ಸರ್ಕಾರವನ್ನ ವಜಾ ಮಾಡಲು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಹುಬ್ಬಳ್ಳಿ ಘಟನೆಯಲ್ಲಿ ಭಾಗಿಯಾದವರ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದು, ಅವರ ಕೇಸನ್ನು ವಾಪಸು ಪಡೆಯಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಸರಾಕರದ ನೀತಿಯನ್ನು ಖಂಡಿಸಿ ಅ.೨೫ ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಈ ಅಯೋಗ್ಯ ಸರ್ಕಾರದ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಬಿಜೆಪಿ ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ ಮಾಡ್ತಾ ಇದ್ದೇವೆ, ಆಡಳಿತ ಪಕ್ಷ ಕೊಟ್ಟ ಭರವಸೆ ತಪ್ಪಿದಾಗ ನಾವು ಹೋರಾಟ ಮಾಡ್ತಾ ಇದೀವಿ, ನಾಗೇಂದ್ರರಂಥ ಸಚಿವರು ರಾಜೀನಾಮೆ ಕೊಟ್ಟಿರುವುದು ಬಿಜೆಪಿ ಕಾರಣದಿಂದ, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸೈಟುಗಳನ್ನು ಸರ್ಕಾರಕ್ಕೆ ವಾಪಾಸು ನೀಡಿರುವುದೂ ಬಿಜೆಪಿಯ ಹೋರಾಟದಿಂದ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ ಎಂದರು.
ಚೆನ್ನಪಟ್ಟಣ, ಸಂಡೂರು ಉಪಚುನಾವಣೆ ಅಭ್ಯರ್ಥಿ ಘೋಷಣೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ರಾಷ್ಟ್ರೀಯ ನಾಯಕರ ಮುಂದೆ ಇದೆ, ಹಲವು ಬಾರಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಆಗಿದೆ. ಆದರೆ ಈವರೆಗೆ ಯಾರು ಅಭ್ಯರ್ಥಿ ಅನ್ನೋದು ಚರ್ಚೆಯಾಗಿಲ್ಲ. ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲೂ ನಾನೇ ಅಭ್ಯರ್ಥಿ ಅಂದಿದ್ದರು, ಆದರೆ ಅಲ್ಲಿನ ಜನ ಅವರಿಗೆ ಅಲ್ಲಿ ಪಾಠ ಕಲಿಸಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲೂ ಜನರು ಅವರಿಗೆ ಪಾಠ ಕಲಿಸ್ತಾರೆ.
ಬಿಜೆಪಿ ಶೀಘ್ರವೇ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ ಎಂದರು. ಪ್ರೇರಣಾ ಟ್ರಸ್ಟ್ ಕೇಸ್ ವಿಚಾರದಲ್ಲಿ ಯಡಿಯೂರಪ್ಪ ರವರ ಮೇಲೆ ಆರೋಪಗಳನ್ನು ಹೊರಿಸುತ್ತಾರೆ, ಈ ವಿಚಾರದಲ್ಲಿ ಕಾಂಗ್ರೇಸ್ ಮುಖಂಡರಿಗೆ ಮಾಹಿತಿ ಕೊರತೆ ಇದೆ. ಅದಕ್ಕೆ ಸಂಬಂಧಿಸಿದ ಕೋರ್ಟ್ ಜಡ್ಜ್ ಮೆಂಟ್ ಕಾಪಿ ಬೇಕಾದರೆ ಕಾಂಗ್ರೆಸ್ ಮುಖಂಡರಿಗೆ ಕಳಿಸಿಕೊಡ್ತೇನೆ ಎಂದು ವಿಜಯೇಂದ್ರ ಹೇಳಿದರು.
ಪರಿಷತ್ ಉಪಚುನಾವಣೆಯ ಕ್ಷೇತ್ರವನ್ನ ಹಾಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿನಿಧಿಸಿದ್ದು, ಈ ಬಾರಿ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದೇವೆ, ಹಾಗಾಗಿ ಇಲ್ಲಿ ನಾವು ದೊಡ್ಡ ಅಂತರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇವೆ ಎಂದರು. ಹರ್ಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಹರಿಯಾಣದಲ್ಲಿ ಹಗಲುಗನಸು ಕಾಣ್ತಿದ್ದ ಕಾಂಗ್ರೆಸ್ ಸೋಲು ಕಂಡಿದೆ. ಜೊತೆಗೆ ಕಾಶ್ಮೀರದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ನಿಂತಿದೆ. ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದ ಕಾಂಗ್ರೇಸ್ ಅನ್ನು ಜಮ್ಮು ಕಾಶ್ಮೀರದಲ್ಲಿ ಮತದಾರರು ತಿರಸ್ಕರಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆಯ ಮೂಲಕ ಬುದ್ದಿ ಕಲಿಸುತ್ತೇವೆ ಎಂದವರು ಈ ಸಂದರ್ಭ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸುಧಾಕರ ರೆಡ್ಡಿ, ಸಂಸದರಾದ, ಕ್ಯಾ.ಬೃಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

