ಮಂಗಳೂರು : ಶನಿವಾರ ರಾತ್ರಿ ಮಂಗಳೂರು ನಗರದ ನಂತೂರಿನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಓವರ್ಟೇಕ್ ಮಾಡುವ ಅವಸರದಲ್ಲಿ ಸ್ಕೂಟರ್ ಸವಾರನೊಬ್ಬ ರಸ್ತೆ ಮಧ್ಯೆ ಇದ್ದ ಒಂದು ದೊಡ್ಡ ಗುಂಡಿಗೆ ಸಿಕ್ಕು ಬಿದ್ದು ನಿಯಂತ್ರಣ ತಪ್ಪಿ ನೇರವಾಗಿ ಬಸ್ಸಿನ ಮುಂದೆ ಬಿದ್ದ ಹಿನ್ನಲೆಯಲ್ಲಿ, ಅಪಾಯದ ಸ್ಥಿತಿ ನಿರ್ಮಾಣವಾಯಿತು.
ಆದರೆ ಈ ಅಪಾಯಕರ ಕ್ಷಣದಲ್ಲೂ ಸಮಯ ಪ್ರಜ್ಞೆ ಮತ್ತು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ಬಸ್ಸಿನ ಚಾಲಕ ಶಶಿಧರ್ ರೈ ಪಡುಮಲೆ ಅವರು ತಕ್ಷಣ ಬ್ರೇಕ್ ಹಾಕಿದ ಕಾರಣ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದರು. ಈ ದೃಶ್ಯ ಬಸ್ಸಿನ ಡ್ಯಾಶ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿದ್ಯಮಾನವನ್ನು ಮನಗಂಡ ಮಂಗಳೂರು ಬೋಳಾರದ ಶರ್ವ (SHARVA) ಎಂಬ ಯುವಕರ ತಂಡವು ಶಶಿಧರ್ ರೈ ಪಡುಮಲೆ ಅವರ ಸಮಯ ಪ್ರಜ್ಞೆಯನ್ನ ಶ್ಲಾಘಿಸಿ ವಿಶೇಷವಾಗಿ ಮಂಗಳಾದೇವಿ ಬಸ್ ನಿಲ್ದಾಣದಲ್ಲಿ ಗೌರವ ಸಮಾರಂಭವನ್ನು ಆಯೋಜಿಸಿತು.

ಶಶಿಧರ್ ರೈ ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ SHARV ತಂಡದ ಮುಖ್ಯಸ್ಥ ಅರ್ಜುನ್ ಬೋಳಾರ್ ಮಾತನಾಡುತ್ತಾ, “ಅಂದಾಜು ತರುವ ಕಾಲಘಟ್ಟದಲ್ಲಿ ತಕ್ಷಣದ ನಿರ್ಧಾರವೆಂದರೆ ಪ್ರಾಣ ಉಳಿಸುವ ಗತಿಯಾಗಿದೆ. ಶಶಿಧರ್ ರೈ ಅವರ ಸಮಯ ಪ್ರಜ್ಞೆ ಮಾದರಿಯಾಗಬಲ್ಲದು. ಇಂಥ ಸ್ಮಾರ್ಟ್ ಚಾಲಕರು ನಿಸ್ಸಂದೇಹವಾಗಿ ಸಮಾಜಕ್ಕೆ ಗರ್ವ,” ಎಂದು ಹೇಳಿದರು.
ನಂತೂರಿನ ರಸ್ತೆಯ ಗುಂಡಿಗಳು ಇನ್ನೊಂದು ಬಾರಿ ಸಾರ್ವಜನಿಕರ ಅಪಾಯಕ್ಕೆ ಕಾರಣವಾದ ಘಟನೆ ಇದು. ಜನಪ್ರತಿನಿದಿಗಳು ಮತ್ತು ಸಂಬಂಧಿತ ಅಧಿಕಾರಿಗಳ ತಾತ್ಸಾರವನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರು ಹರಿದಿಟ್ಟಿದ್ದಾರೆ.ಈ ಘಟನೆಯ ಮುಖಾಂತರ ರಸ್ತೆ ಸುರಕ್ಷತೆಯ ಅಗತ್ಯತೆ ಮತ್ತೊಮ್ಮೆ ಹತ್ತಿರದಿಂದ ಮನಗಂಡಂತಾಗಿದೆ.
ಇದು ಕೇವಲ ಓರ್ವ ಬಸ್ ಚಾಲಕರ ಸಮಯ ಪ್ರಜ್ಞೆಯ ಕಥೆಯಲ್ಲ. ಇದು ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಎಷ್ಟೊಂದು ಅಪಾಯಗಳನ್ನು ತಪ್ಪಿಸಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ. ಶಶಿಧರ್ ರೈ ಪಡುಮಲೆ ಅವರಿಗೆ ಪುನಃಪುನಃ ಅಭಿನಂದನೆಗಳು.

