ಮಂಗಳೂರು: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಹಭಾಗಿತ್ವದಲ್ಲಿ ಕುಡಾಳ್ ದೇಶ್ಕರ್ ಸಮಾಜದ ಸ್ನಾತಕೋತ್ತರ, ಇಂಜಿನಿಯರಿಂಗ್ , ಪದವಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ನಮ್ಮ ಕೊಂಕಣಿ ಭಾಷೆ ನಮ್ಮ ಸಮಾಜ ನಮ್ಮ ಶ್ರೀಮಂತಿಕೆ ಹಾಗೂ ನಮ್ಮ ಅಸ್ತಿತ್ವವಾಗಿದೆ. ಕನಸುಗಳನ್ನು ನೋಡುವುದಕ್ಕಿಂತ ನಾವು ದೃಢಚಿತ್ತದಿಂದ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಅತಿ ಅವಶ್ಯ. ನಾವು ಯಾವುದೇ ದೇಶದಲ್ಲಿ ನಮ್ಮ ವೃತ್ತಿಜೀವನವನ್ನು ನಡೆಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ನಮ್ಮ ಮಾತೃ ಸ್ಥಾನವನ್ನು ಮರೆಯದೆ ತಾಯಿಬೇರಿನಂತೆ ಗಟ್ಟಿಗೊಳಿಸಬೇಕು. ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಈಗಿನ ಕಾಲಕ್ಕೆ ಅತೀ ಅವಶ್ಯಕ” ಎಂದು ಅಧ್ಯಕ್ಷಿಯ ಮಾತುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿಗಳಾದ ಶ್ರೀ ಡಿ ರಮೇಶ ನಾಯಕ್ ಮೈರಾ ಅವರು, “ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಗೌರವಿಸುವ ಉದ್ದೇಶದಿಂದ ಕೂಡಿತ್ತು. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಯಾರನ್ನು ಕಾಯುವುದಿಲ್ಲ ಇದಕ್ಕಾಗಿ ಶಿಕ್ಷಣದ ಜೊತೆಗೆ ಕೌಶಲ್ಯಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕೊಂಕಣಿ ಸಮಾಜಕ್ಕೆ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು, ಇದರಿಂದಾಗಿ ಸಮಾಜ ಅಭಿವೃದ್ಧಿ ಹೊಂದಿ ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಗಳನ್ನು ನೀಡುವಂತಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ‘ಕಾರ್ಯಾಗಾರ ನಮ್ಮ ಶಿಕ್ಷಣಕ್ಕೆ ಪೂರಕವಾಗಿತ್ತು ಮತ್ತು ಬಹಳ ಶಿಸ್ತುಬದ್ಧ ಹಾಗೂ ಪರಿಣಾಮಕಾರಿಯಾಗಿ ಇತ್ತು’ ಎಂದು ಅನುಭವವನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾದ ಕುಡ್ಪಿ ವಿದ್ಯಾ ಶೆಣೈ ಮತ್ತು ಶ್ರೀಮತಿ ಪ್ರೀತಮ್ ಕಾಮತ್ ಇವರು ಮೂರು ದಿನದ ಕಾರ್ಯಾಗಾರವನ್ನು ಚಟುವಟಿಕೆ ಆಧಾರಿತವಾಗಿ ನಡೆಸಿಕೊಟ್ಟರು.
ಡಾ.ವಿಜಯಲಕ್ಷ್ಮಿ ನಾಯಕ್ ಅವರು ನಾಲ್ಕು ದಿನಗಳ ಈ ಕಾರ್ಯಗಾರದ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿಕೊಂಡು ಬಹಳ ಶಿಸ್ತುಬದ್ಧವಾಗಿ ನಿರ್ವಹಿಸಿದರು ಈ ಸಂದರ್ಭದಲ್ಲಿ ಅವರು ಮಕ್ಕಳಿಗೆ ಪ್ರೋತ್ಸಾಹದ ನುಡಿಗಳ ಜೊತೆಯಲ್ಲಿ ಶುಭವನ್ನು ಹಾರೈಸಿ ಅಭಿನಂದಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ. ದೇವದಾಸ್ ಪೈ, ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿಗಳಾದ ಶ್ರೀ ಮುರಳಿಧರ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು, ಸಂಘದ ಕಾರ್ಯದರ್ಶಿಗಳಾದ ದಯಾನಂದ ನಾಯಕ್ ಪೂಂಜಾಲ್ ಕಟ್ಟೆ, ಹಿರಿಯ ಮಾರ್ಗದರ್ಶಕರಾದ ಶ್ರೀ ಗೋಪಾಲ್ ಶೆಣೈ ಕೊಡಂಗೆ, ಶ್ರೀಮತಿ ಸುಜಾತ ರಮೇಶ್ ಸಾಮಂತ್, ರಂಜಿತಾ ಜಯರಾಮ್ ನಾಯಕ್, ಶ್ರೀಮತಿ ಸುಚಿತ್ರ ರಮೇಶ ನಾಯಕ್, ಮೋಹನ್ ನಾಯಕ್ ಒಡ್ಡೂರು, ಉಪೇಂದ್ರ ನಾಯಕ್, ರವೀಂದ್ರ ನಾಯಕ್ ಕುಂಟಲ್ಪಾಡಿ, ರಾಜೇಶ್ ಪ್ರಭು ಬನ್ನೂರು ,ಶಿಕ್ಷಕರ ಸಹಕಾರಿ ಸಂಘದ ಸುಭಾಷ್ ಚಂದ್ರ ನಾಯಕ್, ದೇವದಾಸ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಶಿಭಿರಾಥಿ೯ಗಳಾದ ಅಶ್ವಿನಿ ಕಾರ್ಯಾಗಾರದ ವರದಿಯನ್ನು ಮಂಡಿಸಿದರು. ಪ್ರಜ್ಞಾ ಪ್ರಭು ವೇಣೂರು ಸ್ವಾಗತಿಸಿ, ರಿತೇಶ್ ವಂದಿಸಿದರು. ಶ್ರೀರಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.

