ಮಂಗಳೂರು : ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಯಲ್ಲಿರುವ ಪಿ.ಎಂ ಸ್ವನಿಧಿ ಸಾಲ ಯೋಜನೆಯನ್ನು ಜಾರಿಗೊಳಿಸಬೇಕಾದ ರಾಷ್ಟ್ರೀಕೃತ ಬ್ಯಾಂಕುಗಳು ಬೀದಿಬದಿ ವ್ಯಾಪಾರಿಗಳಿಗೆ ಸಮರ್ಪಕವಾಗಿ ಸಾಲ ಮಂಜೂರು ಮಾಡದೆ, ಅನಗತ್ಯ ದಾಖಲೆಗಳನ್ನು ಕೇಳಿ ಸಾಲ ನಿರಾಕರಣೆ ಮಾಡುತ್ತಿದೆ. ಕೆಲವು ಬ್ಯಾಂಕುಗಳು ಸಿಬಿಲ್ ಸ್ಕೋರ್ ನೋಡಿ ಸಾಲ ನೀಡದೆ ವಂಚಿಸುತ್ತಿದೆ.

ಇನ್ನು ಕೆಲವು ಬ್ಯಾಂಗಳು ಎಲ್ಲಾ ದಾಖಲೆಗಳನ್ನು ಒದಗಿಸಿದರೂ ಸಾಲ ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಸಾಲದ ಅವಶ್ಯಕತೆ ಇರುವ ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಆಗುತ್ತಿದ್ದು ಈ ಬಗ್ಗೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಇದರ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿತು.

ಬೀದಿಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ 15000 ಸಾಲ ಪಡೆದು ಮರುಪಾವತಿ ಮಾಡಿದ ಬೀದಿ ವ್ಯಾಪಾರಿಗಳು ಎರಡನೇ ಮತ್ತು ಮೂರನೇ ಹಂತದ ಸಾಲ ಪಡೆಯಲು ಅರ್ಹರಿದ್ದರೂ ವಿನಾ ಕಾರಣ ಬಡವರ ಹಕ್ಕಿನ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನಿರಾಕರಿಸುತ್ತಿದೆ. ಬಡ ಬೀದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವ ಸರಕಾರದ ಯೋಜನೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳು ವಿಫಲಗೊಳಿಸುತ್ತಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘವು ಆರೋಪಿಸಿದೆ

ರಾಷ್ಟ್ರೀಕೃತ ಮತ್ತು ಖಾಸಗಿ ವಲಯಗಳಲ್ಲಿರುವ ಬ್ಯಾಂಕು ಗಳ ಸಭೆ ನಡೆಸಿ ಪಿ.ಎಂ ಸ್ವನಿಧಿ ಸಾಲ ಯೋಜನೆಯ ಪ್ರಗತಿ ಪರಿಶೀಲಿಸಿ ಬಡ ಬೀದಿ ವ್ಯಾಪಾರಿಗಳಿಗೆ ಸಾಲ ನೀಡದೆ ವಂಚಿಸುತ್ತಿರುವ ಬ್ಯಾಂಕುಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ನಿಯೋಗವು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪಿ.ಎಂ ಸ್ವ ನಿಧಿ ಸಾಲ ಮಂಜೂರು ಮಾಡದೆ ಬೀದಿಬದಿ ವ್ಯಾಪಾರಿಗಳನ್ನು ಸತಾಯಿಸುವ ಬ್ಯಾಂಕುಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಅಧ್ಯಕ್ಷರಾದ ಮುಝಫರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್, ಉಪಾಧ್ಯಕ್ಷರಾದ ಎಂ. ಎನ್ ಶಿವಪ್ಪ, ಕೋಶಾಧಿಕಾರಿ ಹಂಝ ಮೊಹಮ್ಮದ್ ಮತ್ತು ಅಶ್ರಫ್ ಉಪಸ್ಥಿತರಿದ್ದರು.