ಮಂಗಳೂರು : ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಮಳೆಗಾಲದ ಅಗತ್ಯ ಕಾಮಗಾರಿ ಹೊರತುಪಡಿಸಿ ಯಾವುದೇ ಹೊಸ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಕೈಗೆತ್ತಿಕೊಳ್ಳಲಾದ ವಿವಿಧ ಯೋಜನೆಗಳಲ್ಲಿ ಅಗೆದಿರುವ ರಸ್ತೆಗಳನ್ನು ಕೂಡಲೇ ಯಥಾ ಸ್ಥಿತಿಗೆ ತಂದು ಮುಗಿಸಬೇಕು. ಮಳೆ ನೀರಿನ ಸರಾಗ ಹರಿವಿಗೆ ತೊಂದರೆಯಾಗಿರುವ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಖಾಸಗಿ ಕಟ್ಟಡ ಕಾಮಗಾರಿ ನಿರ್ಮಾಣ ಸಾಮಗ್ರಿಗಳನ್ನು ಮತ್ತು ಅವಶೇಷಗಳನ್ನು ರಸ್ತೆ ಬದಿ ಹಾಗೂ ಫುಟ್‍ಪಾತ್‍ನಲ್ಲಿ ಹಾಕಿರುವುದನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ತೀವ್ರ ಮಳೆಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು 48 ಗಂಟೆಯೊಳಗೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದ ಸಿದ್ಧತೆಗೆ ನೇಮಕವಾಗಿರುವ ವಾರ್ಡುವಾರು ಇನ್ಸಿಡೆಂಟ್ ಕಮಾಂಡರ್‍ಗಳು ಸಾರ್ವಜನಿಕರ ಸೇವೆಗೆ ಸದಾ ಲಭ್ಯವಿರಬೇಕು. ತಮ್ಮ ವಾರ್ಡಿನಲ್ಲಿ ಪ್ರತಿಯೊಂದು ಸ್ಥಳಕ್ಕೂ ಭೇಟಿ ನೀಡಿ ಮಳೆಹಾನಿ ನಿಯಂತ್ರಿಸಲು ಈಗಿಂದಲೇ ಗಮನಹರಿಸಬೇಕು. ಯಾವುದೇ ಅನಾಹುತ ಸಂಭವಿಸಿದರೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಅರಣ್ಯ, ಅಗ್ನಿಶಾಮಕ, ಕಂಟ್ರೋಲ್ ರೂಮ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸೂಚಿಸಿದರು. ಯುಜಿಡಿ ಬ್ಲಾಕ್ ಆಗಿ ನೀರು ಬರುವಂತಹ ಸನ್ನಿವೇಶವನ್ನು ತಪ್ಪಿಸಬೇಕು. ಹೆದ್ದಾರಿ ಮತ್ತು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅರ್ಧ ಗಂಟೆಯಲ್ಲಿ ತೆರವುಗೊಳಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ರಾಜು ಕೆ ಮಾತನಾಡಿ, ಮಳೆಗಾಲ ಮತ್ತು ವಿಪತ್ತು ನಿರ್ವಹಣೆಗೆ ನೇಮಕವಾದ ಸರಕಾರಿ ನೌಕರರು ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಉಪ ಪೊಲೀ ಸ್ ಆಯುಕ್ತ ಮಿಥುನ್ ಹೆಚ್ ಎನ್, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)