ಮಂಗಳೂರು : ಕರಾವಳಿ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನೂತನ ಮುಖ್ಯಮಂತ್ರಿ ಡಿಕೆಶಿಯವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆಯುವುದಾಗಿ ಹೇಳಿದ್ದು, ಈ ಮೂಲಕ ಕರಾವಳಿ ಪ್ರವಾಸೋದ್ಯಮ ಹೊಸ ರೂಪು ಪಡೆಯುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಪ್ರವಾಸೋದ್ಯಮ ಕುರಿತಂತೆ ಅವರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಪ್ರವಾಸೋಮದ್ಯಕ್ಕೆ ಸವಾಲಾಗಿರುವ ಸಿಆರ್ಝಡ್, ಅರಣ್ಯ ಇಲಾಖೆಯ ಕೆಲ ತಾಂತ್ರಿಕ ಸಮಸ್ಯೆಗಳ ನಿವಾರಣೆ ಹಾಗೂ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕರಾವಳಿಯ ಪ್ರಾಕೃತಿಕ ಸೌಂದಯಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿಯ ಜತೆಗೆ ಇಲ್ಲಿನ ಆಚರಣೆಗಳು, ಸಂಪ್ರದಾಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಮುಖ್ಯಮಂತ್ರಿ ಡಿಕೆಶಿಯವರು ಹೊಂದಿದ್ದು, ಬಂಡವಾಳ ಹೂಡಿಕೆದಾರರಿಗೆ ಸಬ್ಸಿಡಿ ನೀಡಿ ಉತ್ತೇಜಿಸಲು ಮುಂದಾಗಿ ದ್ದಾರೆ.
ಕರಾವಳಿಯ ಆಕರ್ಷಣೆಯ ಜನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ದಸರಾ ಸಂದರ್ಭ ಮೈಸೂರಿನಲ್ಲಿ ನಡೆಸಲು ಮುಂದಾಗಿರುವುದಲ್ಲದೆ, ಕಂಬಳ ಸಮಿತಿಯ ಬೇಡಿಕೆಯಂತೆ 5 ಕೋಟಿ ರೂ. ನೆರವು ನೀಡುವ ಭರವಸೆ ಯನ್ನೂ ನೀಡಿದ್ದಾರೆ. ಈ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಿ ಜಿಲ್ಲೆಯ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

