ಮಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಇದರ ಅಂಗವಾಗಿ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಳನೇ ವರ್ಷದ ತುಪ್ಪದ ದೀಪೋತ್ಸವ ಹಾಗೂ 15 ತಂಡಗಳ ಕುಣಿತ ಭಜನೆ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.

ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯಕ್, ಸಂತೋಷ್ ಪೊಳಲಿ, ಅನಂತ ಪದ್ಮನಾಭ ಭಟ್, ರಾಮ ಭಟ್, ವೆಂಕಟೇಶ್ ನಾವಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಳಿಕ 15 ತಂಡಗಳ ಕುಣಿತ ಭಜನೆ ಕಾರ್ಯಕ್ರಮಕ್ಕೂ ಗಣ್ಯರು ದೀಪ ಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ಕುಣಿತ ಭಜನೆಯ ಮೂಲಕ ಭಕ್ತರು ಭಕ್ತಿಯ ಪರವಶತೆಯಲ್ಲಿ ಸಂಭ್ರಮಿಸಿದರು. ದೀಪಾವಳಿ ಪ್ರಯುಕ್ತ ಪೊಳಲಿ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವ ನಡೆಯಲಿದೆ.