ಮಂಗಳೂರು : ಹಿಂದುಳಿದ ಆಯೋಗದ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅರ್ಧದಲ್ಲೇ ಸಭೆ ಬಿಟ್ಟು ಹೊರಟು, ಅಪೂರ್ಣ ಮಾಹಿತಿಯ ಆಧಾರದ ಮೇಲೆ ಪ್ರೆಸ್ ಮೀಟ್ ನಡೆಸಿ ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ, ಪೂರ್ತಿಯಾಗಿ ಕೂತಿದ್ದರೆ ಅವರಿಗೆ ಈ ರೀತಿ ಗೊಂದಲ ಆಗ್ತಾ ಇರ್ಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯ್ ರಾಜ್ ಆರೋಪಿಸಿದರು.

ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಗಳಿಗೆ ಉತ್ತರ ನೀಡುವ ಸಲುವಾಗಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ ಅವರು, “ಬಿಜೆಪಿ ಜಾತಿ ಸಮೀಕ್ಷೆ ಕುರಿತು ಗೊಂದಲ ಸೃಷ್ಟಿಸುತ್ತಿದೆ. 1.55 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಮನೆಮನೆಗೆ ಮೆಸ್ಕಾಂ ಬಿಲ್ ಕಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಮೂಲಕ ಯಾವುದೇ ಮನೆ ಬಿಟ್ಟು ಹೋಗದಂತೆ ವ್ಯವಸ್ಥೆ ಮಾಡಲಾಗಿದೆ. ಸಮೀಕ್ಷೆಗೆ ವಿಶೇಷ ಆಪ್ ಸಿದ್ಧಗೊಂಡಿದೆ. ಒಟ್ಟು 60 ಪ್ರಶ್ನೆಗಳಿರುವ ಈ ನಮೀಕ್ಷೆ ಕೇವಲ ಜಾತಿ ಕುರಿತದ್ದಲ್ಲ; ವಿದ್ಯಾಭ್ಯಾನ, ಆರ್ಥಿಕ ಸ್ಥಿತಿ, ವೃದ್ಧಾಪ್ಯ ವೇತನ, ಉದ್ಯೋಗ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಹಿಂದುಳಿದ ವರ್ಗಗಳ ಏಳಿಗೆಗೆ ಬಳಸಲಾಗುತ್ತದೆ,’ ಎಂದರು.

ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಿಂದುಳಿದ ವರ್ಗಗಳ ಪರವಾ ವಿರೋಧಿಗಳಾ ಎಂದು ಸ್ಪಷ್ಟಪಡಿಸಬೇಕೆಂದು ಅವರು ಸವಾಲು ಹಾಕಿದ ಅವರು, “ಮಾಹಿತಿ ಇಲ್ಲದಿದ್ದರೆ ಕೇಳಿ, ಆದರೆ ಸುಳ್ಳು ಹೇಳಿ ಜನರಲ್ಲಿ ಗೊಂದಲ ಸೃಷ್ಟಿಸಬೇಡಿ, ಸಭೆಯಲ್ಲಿ ಕೊನೆಯವರೆಗೂ ಕೂತಿದ್ದರೆ ಕಾಮತ್ ಅವರಿಗೆ ವಿಷಯ ಅರ್ಥವಾಗುತ್ತಿತ್ತು,” ಎಂದು ವಿನಯ್ ರಾಜ್ ಕುಟುಕಿದರು.

ಮರಳಿನ ಸಮಸ್ಯೆಯ ಕುರಿತು ಕಾಮತ್ ಸರ್ಕಾರವನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸ್ಯಾಂಡ್ ಬಜಾರ್ ಅಪ್ ಮೂಲಕ ನಮಸ್ಯೆ ಬಗೆಹರಿಸಲ್ಪಟ್ಟಿತ್ತು ಎಂದು ನೆನಪಿಸಿದರು. “ಅಕ್ರಮ ಗಣಿಗಾರಿಕೆಯ ಪರವಾಗಿರಬೇಡಿ, ಜನರ ಪರವಾಗಿರಿ. ಮುಂದೆ ಖಾದರ್ ಮತ್ತು ಗುಂಡೂರಾವ್ ಅವರ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತವಾಗಿ ಮರಳು, ಕಲ್ಲು ದೊರೆಯಲಿದೆ,” ಎಂದು ಹೇಳಿದರು.

ಸ್ಪೀಕರ್ ಆಗಿರುವ ಖಾದರ್‌ಗೆ ಮಾತಾಡಲು ಯಾವ ಹಕ್ಕು ಇದೆ ಎಂದು ಕಾಮತ್ ಕೇಳಿದ್ದಾರೆ. ಕಾಮತರೇ ನಿಮಗಿಂತ ಮುಂಚೆಯೇ ಶಾಸಕರಾಗಿದ್ದಾರೆ. ಅವರ ಪ್ರಬುದ್ಧತೆ ನಿಮಗಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಹಕ್ಕು ಎನ್ನುವುದನ್ನು ಅವರು ಮರೆತಿಲ್ಲ. ಅವರು ಈ ಮಣ್ಣಿನ ಮಗ, ತುಳುವ, ಇದೇ ರೀತಿ ಮುಂದೆಯೂ ಜನರ ಅಶೋತ್ತರಗಳಿಗೆ ಸ್ಪಂದನೆ ಕೊಡ್ತಾರೆ ಎಂದರು. ಆಯೋಗಗಳ ಸಭೆಗೆ ಖಾದರ್ ಹೇಗೆ ಭಾಗವಹಿಸಿದ್ದಾರೆ ಎಂದು ಕೇಳುವ ಕಾಮತ್ ಅವರೇ, ಮೊನ್ನೆ ನಡೆದಿರುವುದು ಹಿಂದುಳಿದ ವರ್ಗಗಳ ರಾಜಕೀಯ ರಹಿತ ಸಭೆ. ಹಾಗಾಗಿ ಸ್ಪೀಕರ್ ಅದರಲ್ಲಿ ಭಾಗವಹಿಸಿದ್ದಾರೆ. ಸ್ಪೀರ್ಕಗೆ ಈ ಬಗ್ಗೆ ಮಾಹಿತಿ ಇದೆ. ನಿಮಗೆ ಆ ಮಾಹಿತಿ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬರ್ತಾ ಇಲ್ಲ ಎಂದು ಸುಳ್ಳು ಹೇಳುವುದು ಸರಿಯಲ್ಲ. ಸಿಎಂ ಅವರು 200 ಕೋಟಿ ಹಣ ಕೊಟ್ಟಿದ್ದಾರೆ ಎನ್ನುವುದ ನಿಮಗೂ ಗೊತ್ತಿದೆ ಎಂದರು.

ಇದೇ ವೇಳೆ ಮಂಗಳೂರು ದಸರಾ ಹಬ್ಬಕ್ಕೆ ಹಾಕಲಾಗಿದ್ದ ಪ್ಲೆಕ್ಸ್ ತೆರವುಗೊಳಿಸುವ ವಿಚಾರವನ್ನು ಉದಾಹರಿಸಿ, ಅದಕ್ಕೆ ಕಾಮತ್ ಕುಮ್ಮಕ್ಕು ಇದೆ ಎಂಬ ಜನರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು. “ಇದು ನಾಡಹಬ್ಬ, ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಕಾಮತ್ ಜನರ ಪರವಾಗಿ ಧ್ವನಿ ಎತ್ತಬೇಕಿತ್ತು” ಎಂದು ವಿನಯ್ ರಾಜ್ ಟೀಕಿಸಿದರು.