ಮಂಗಳೂರು: ಬಂಟ್ವಾಳ ರೆಹಮಾನ್ ಹತ್ಯೆ ಕೇಸ್ ನಲ್ಲಿ ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್ ಮಾಡಲಾಗ್ತಿದೆ. ಪೊಲೀಸರನ್ನ ಬಳಸಿ ಸಂಘಟನೆ ಕಾರ್ಯಕರ್ತರ ಮೇಲೆ ಸರ್ಕಾರ ಪ್ರಕರಣ ದಾಖಲಿಸ್ತಿದೆ. ಗಡೀಪಾರು, ರೌಡಿಶೀಟರ್ ಸೇರಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ತಿದೆ. ಪುತ್ತೂರು ಹಾಗೂ ಇತರೆಡೆ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ಹೋಗ್ತಾ ಇದಾರೆ ಎಂದು ಮಂಗಳೂರಿನಲ್ಲಿ ಪ್ರಾಂತ ಬಜರಂಗದಳ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿಕೆ ನೀಡಿದರು.

ಎಲ್ಲಾ ಕೇಸ್ ಗಳನ್ನ ಸಂಘಟನೆ ಮೇಲೆ ತರುವ ಕೆಲಸ ರಾಜ್ಯ ಸರ್ಕಾರ ಮಾಡ್ತಿದೆ. ಕರಾವಳಿ ಭಾಗದಲ್ಲಿ ಹಿಂದೂ ಸಂಘಟನೆಗಳನ್ನ ಮಟ್ಟ ಹಾಕುವ ಕೆಲಸ ಆಗ್ತಿದೆ. ಆದರೆ ಇಂಥ ಕೆಲಸಕ್ಕೆ ಕೈ ಹಾಕಿದರೆ ನಾವು ಹೆದರುವುದಿಲ್ಲ. ರೆಹಮಾನ್ ಕೇಸ್ ನಲ್ಲಿ ನಮ್ಮ ಕಾರ್ಯಕರ್ತರ ಸಿಲುಕಿಸುವ ಯತ್ನ ಆಗ್ತಿದೆ. ಭಜರಂಗದಳ ಸಂಯೋಜಕ ಎನ್ನುವ ಕಾರಣಕ್ಕಾಗಿ ಭರತ್ ಕುಮ್ಡೇಲು ಸಿಲುಕಿಸೋ ಯತ್ನ ಆಗ್ತಿದೆ ಎಂದರು.

ಅದನ್ನ ಮುಂದಿಟ್ಟು ಭರತ್ ಮನೆ ಶೋಧ ಮಾಡಲಾಗಿದೆ. ರೆಹಮಾನ್ ಹತ್ಯೆ ವೈಯಕ್ತಿಕ ಹಾಗೂ ಮರಳು ದಂಧೆ ಕಾರಣಕ್ಕಾಗಿ ನಡೆದಿದೆ ಎನ್ನಲಾಗಿದೆ. ಹಾಗಾಗಿ ಅವುಗಳ ಬಗ್ಗೆ ಪೊಲೀಸರು ತನಿಖೆ ನಡೆಸಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಸಿಲುಕಿಸಲು ಯತ್ನಿಸಿದರೆ ದೊಡ್ಡ ಮಟ್ಟದ ಹೋರಾಟ. ಸಂಘಟನೆ ಯಾವುದೇ ಹತ್ಯೆಗಳನ್ನ ಸಮರ್ಥನೆ ಮಾಡುವುದಿಲ್ಲ. ಆದರೆ ಸಂಘಟನೆ ಕಾರ್ಯಕರ್ತರನ್ನ ಸಿಲುಕಿಸುವ ಯತ್ನ ನಾವು ಸಹಿಸಲ್ಲ ಎಂದರು.

ಭರತ್ ಕುಮ್ಡೇಲು ಹೆಸರನ್ನ ಈ ಕೇಸ್ ನಲ್ಲಿ ತಂದರೆ ರಾಜ್ಯವ್ಯಾಪಿ ಹೋರಾಟ, ಸುಹಾಸ್ ಹತ್ಯೆಯಾದಾಗ ಸೌಜನ್ಯಕ್ಕೂ ಇವರು ಅವರ ಮನೆಗೆ ಹೋಗಿಲ್ಲ, ಹಿಂದೂ ಸಮಾಜ ಈ ವಿಚಾರದಲ್ಲಿ ಉತ್ತರ ಕೊಡಲು ಸಿದ್ದವಿದೆ. ಭರತ್ ಕುಮ್ಡೇಲು ಭಾಷಣಗಳ ಮೇಲೆ ಕೇಸ್ ಆಗಿದೆ, ಅದು ನಡೀತಾ ಇದೆ. ಅವರು ಆ ಹೊತ್ತಿನಲ್ಲಿ ಅವರ ಭಾವನೆ ವ್ಯಕ್ತಪಡಿಸಿರಬಹುದು. ಸರ್ಚ್ ವಾರೆಂಟ್ ಇಲ್ಲದೇ ಪೊಲೀಸರು ಭರತ್ ಮನೆಯಲ್ಲಿ ಹುಡುಕಾಟ ಮಾಡಿದ್ದಾರೆ.

ತನಿಖೆಗೆ‌ ನಮ್ಮ ಯಾವುದೇ ಅಭ್ಯಂತರ ಇಲ್ಲ, ಆದರೆ ಕಾನೂನು ಪ್ರಕಾರ ಮಾಡಲಿ. ರಾಜಕೀಯ ಉದ್ದೇಶಕ್ಕಾಗಿ ಪೊಲೀಸರನ್ನ ಬಳಸೋದು ಸರಿಯಲ್ಲ. ರೆಹಮಾನ್ ಹತ್ಯೆಯನ್ನು ನಮ್ಮ ಸಂಘಟನೆ ಸಮರ್ಥನೆ ಮಾಡಲ್ಲ. ನಮ್ಮ ಸಂಘಟನೆಯನ್ನು ಬೇರೆ ಸಂಘಟನೆ ಜೊತೆ ಥಳುಕು ಹಾಕೋದು ಸರಿಯಲ್ಲ. ಭರತ್ ನಮ್ಮ ಕಾರ್ಯಕರ್ತ ಅನ್ನೋ ಕಾರಣಕ್ಕಾಗಿ ಟಾರ್ಗೆಟ್ ಮಾಡ್ತಾ ಇದಾರೆ. ಭರತ್ ಕುಮ್ಡೇಲು ಬಂಧನವಾದ್ರೆ ನಮ್ಮ‌ ಉಗ್ರ ಪ್ರತಿಭಟನೆ ಎಂದರು.