ಮಂಗಳೂರು: ಬಿಜೆಪಿಯ ಭದ್ರ ಕೋಟೆ ಎಂದೇ ಹೇಳಲಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದು, ಸತತ ಗೆಲುವಿನ ಓಟವನ್ನು ಕಮಲ ಪಡೆ ಮುಂದುವರಿಸುವ ಸುಳಿವು ದೊರೆತಿದೆ.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿರುದ್ಧ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿನತ್ತ ಮುನ್ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ಅವಧಿಗಳಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದು ಬೀಗಿದೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಜನಾಕ್ರೋಶ, ಪಕ್ಷದ ಆಂತರಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾದ ಕಾರಣ ಬಿಜೆಪಿ ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿತ್ತು.
ಈ ಲೋಕಸಭೆ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ 66,440 ರಷ್ಟು ಮತಗಳು ಹೆಚ್ಚಾಗಿವೆ. ಕ್ಷೇತ್ರದಲ್ಲಿ 2019ರಲ್ಲಿ 13,43,213 ಮತಗಳು ಚಲಾವಣೆಯಾಗಿದ್ದರೆ, ಈ ಬಾರಿ 14,09,653 ಮತಗಳು ಚಲಾವಣೆಯಾಗಿವೆ.
ಇನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16 ಚುನಾವಣೆಗಳು ನಡೆದಿವೆ. ಈವರೆಗೆ 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 9 ಬಾರಿ ಗೆಲುವು ಸಾಧಿಸಿದೆ.

