ದಕ್ಷಿಣ ಕನ್ನಡ: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಬೊಲೆರೊ ವಾಹನ ಚಲಾಯಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದು, 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಬಳಿ ನಡೆದಿದೆ.
ಕಲ್ಮಂಜ ಗ್ರಾಮದ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿಯಾದ ಅನರ್ಘ್ಯ ಮೃತ ಬಾಲಕಿ. ಇನ್ನು ಅಪಘಾತ ಬಳಿಕ ವಾಹನದ ಸಮೇತ ಪರಾರಿಯಾಗುತ್ತಿದ್ದವರನ್ನು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಸ್ಥಳೀಯರು ಹಿಡಿದಿದ್ದಾರೆ.
ಮೃತ ಅನರ್ಘ್ಯ, ಉಜಿರೆ ಎಸ್ಡಿಎಂ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೈಕ್ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಬೊಲೆರೊ 30 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಅನರ್ಘ್ಯ ಕೊನೆಯುಸಿರೆಳೆದಿದ್ದಾಳೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

