ಮಂಗಳೂರು: ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಬಿಜೆಪಿಗರು, ಈ ದೇಶಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಯನ್ನು ನೀಡಿದ ಪಕ್ಷ ಯಾವುದು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತಂದಿರುವ ಮಹಿಳಾ ಮೀಸಲಾತಿ ಮಸೂದೆ ಕೇವಲ ಚುನಾವಣಾ ಕಾಲದ ಗಿಮಿಕ್ ಆಗಿದ್ದು, ಮಹಿಳೆಯರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಆರೋಪಿಸಿದರು.
ಭಾರತದ ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಹೇಳಿದ ಅವರು, 73 ಹಾಗೂ 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ನೀಡಿತ್ತು. ಆ ವೇಳೆ ರಾಜ್ಯಸಭೆಯಲ್ಲಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದೇ ಬಿಜೆಪಿ ನಾಯಕರು. ಅಂದು ಅಡ್ಡಿಪಡಿಸಿದವರೇ ಇಂದು ಮಹಿಳಾ ಪರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಮಸೂದೆ ಜಾರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಸೂದೆಯನ್ನು ಅಂಗೀಕರಿಸಿದರೂ, ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಷರತ್ತುಗಳನ್ನು ವಿಧಿಸಿರುವುದು ಜಾರಿಗೆ ವಿಳಂಬ ಮಾಡುವ ಯತ್ನವಾಗಿದೆ ಎಂದು ದೂರಿದರು. ಇದರಿಂದ ಮುಂದಿನ ಹಲವು ವರ್ಷಗಳ ಕಾಲ ಮಹಿಳಾ ಮೀಸಲಾತಿ ಜಾರಿಗೆ ಬಾರದ ಪರಿಸ್ಥಿತಿ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗದ (ಒಬಿಸಿ) ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ಮೌನ ವಹಿಸಿರುವುದನ್ನು ಅವರು ಪ್ರಶ್ನಿಸಿದರು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೋಷಿತ ವರ್ಗದ ಮಹಿಳೆಯರಿಗೂ ಸಮರ್ಪಕ ಅವಕಾಶ ಸಿಗದಿದ್ದರೆ ಈ ಮೀಸಲಾತಿ ಸಂಪೂರ್ಣವಾಗುವುದಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತವನ್ನು ಸ್ಮರಿಸಿದ ಅವರು, ಬ್ಯಾಂಕ್ ರಾಷ್ಟ್ರೀಕರಣ ಹಾಗೂ ಭೂ ಸುಧಾರಣೆಗಳಂತಹ ನಿರ್ಧಾರಗಳ ಮೂಲಕ ಮಹಿಳೆಯರು ಮತ್ತು ದಲಿತರ ಜೀವನದಲ್ಲಿ ಮಹತ್ವದ ಬದಲಾವಣೆ ತಂದರು ಎಂದು ಹೇಳಿದರು. ಮಹಿಳೆಯರ ಹಿತದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಬದ್ಧತೆ ಇಂದಿರಾ ಗಾಂಧಿಯವರ ಕಾಲದಿಂದಲೇ ಮುಂದುವರಿದಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಹಿಳಾ ಮೀಸಲಾತಿ ಮಸೂದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಒಬಿಸಿ ಹಾಗೂ ಶೋಷಿತ ವರ್ಗದ ಮಹಿಳೆಯರಿಗೂ ನ್ಯಾಯ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

