ಮಂಗಳೂರು : ಕೆಂಪು ಕಲ್ಲು ಗಣಿಗಾರಿಕೆಯ ಸಮಸ್ಯೆ ಸರಿಪಡಿಸಲು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಕ್ರಮ ಕೈಗೊಂಡ ಬಳಿಕ ಬಿಜೆಪಿಯ ಶಾಸಕರು ಸೇರಿ ಪ್ರತಿಭಟನೆ ನಡೆಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಂಪು ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಬಿಜೆಪಿಯ ರಾಜಕೀಯ ನಟನೆ ಮಾಡುತ್ತಿದೆ. ಅವರಿಗೆ ಜನರ ಬಗ್ಗೆ ಪ್ರಾಮಾಣಿಕವಾದ ಕಾಳಜಿಯಿಲ್ಲ ಎಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದ.ಕ. ಸಂಸದರು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುವ ಬದಲು ತಮ್ಮಿಂದ ಸಾಧ್ಯವಾಗುವ ಕೆಲಸವನ್ನು ಮಾಡಬಹುದಿತ್ತು. ಸಿಆ‌ರ್ ಝಡ್ ನಿಯಮ ಸಡಿಲಗೊಳಿಸಲು ಪ್ರಯತ್ನ ಮಾಡಬಹುದಿತ್ತು.

ರಾಷ್ಟ್ರೀಯ ಹೆದ್ದಾರಿಗಳು ರಸ್ತೆ ಹೊಂಡಗಳಿಂದ ತುಂಬಿ ಅವೈಜ್ಞಾನಿಕ ಕಾಮಗಾರಿಗಳಿಂದ ವಾಹನ ಸವಾರರು ಸಾರ್ವಜನಿಕರು ಪರದಾಡುವಂತಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದಿಂದ ಆಗಿಲ್ಲ. ಅಭಿವೃದ್ಧಿ ಕೆಲಸದಲ್ಲಿ ಈ ರೀತಿಯ ರಾಜಕೀಯ ಬೇಡ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.