ಮಂಗಳೂರು : ಕರ್ನಾಟಕದ ಸಂಸದರು ಸಂಸತ್ತಿಗೆ ಹೋಗುವುದು ಬೆಂಚು ಬಿಸಿ ಮಾಡುವುದಕ್ಕಾ ಅಥವಾ ಪ್ರಧಾನಿ ಮೋದಿ ಹೇಳಿದ್ದನ್ನು ಕೇಳಿ ಬರುವುದಕ್ಕಾ? ರಾಜ್ಯಕ್ಕೆ ಸಿಗಬೇಕಾದ ಸವಲತ್ತುಗಳು, ಅನುದಾನ ಹಾಗೂ ನ್ಯಾಯಯುತ ಪಾಲಿನ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತದ ಬಿಜೆಪಿ ಸಂಸದರು ಇದೀಗ ವಿಪಕ್ಷಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಟೀಕಿಸಿದ್ದಾರೆ.

ಮಂಗಳೂರಿನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ತೈಲ ಬೆಲೆಯೇರಿಕೆಯಿಂದಾಗಿ ಎಲ್ಲಾ ವಸ್ತುಗಳ ಬೆಲೆಯೇರಿಕೆಯಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದನ್ನು ನಿಯಂತ್ರಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಒಂದು ಕುಟುಂಬಕ್ಕೆ ಮಾಸಿಕ ಸುಮಾರು ಏಳು ಸಾವಿರ ರೂಪಾಯಿಗಳಷ್ಟು ನೆರವು ದೊರೆಯುತ್ತಿದೆ.

ರೈತರನ್ನು ರಕ್ಷಿಸಬೇಕೆನ್ನುವ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ವಿಧಾನಮಂಡಲದಲ್ಲಿ ಚರ್ಚಿಸಿ ಹಾಲಿನ ದರ ಹೆಚ್ಚಿಸಿ ನೇರವಾಗಿ ಹಾಲು ಉತ್ಪಾದಕರಿಗೆ ನೀಡುತ್ತಿದೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿಯವರು ರೈತರಿಗೆ ಈ ಹಣ ನೀಡುವುದು ಬೇಡ ಎಂದಾದರೆ ಅದನ್ನು ಸ್ಪಷ್ಟವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಬಸ್ ಪ್ರಯಾಣ ದರ ಏರಿಕೆ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ರಾಜಕೀಯ ನಾಯಕರಿಗೆ ಕೇಂದ್ರ ಸರ್ಕಾರ ಇಂಧನ ದರವನ್ನು ಯಾವ ಮಟ್ಟಕ್ಕೆ ಹೆಚ್ಚಿಸಿದೆ ಎಂಬ ಕನಿಷ್ಠ ಅರಿವು ಇಲ್ಲವೇ? ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರ ಎಷ್ಟು ಬಾರಿ ಇಂಧನ ದರ ಹೆಚ್ಚಿಸಿತ್ತು ಎಂಬುದನ್ನು ಜನರು ನೆನಪಿಸಿಕೊಳ್ಳಬೇಕು. ದೇಶದಲ್ಲೇ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಕೆಎಸ್‌ಆರ್‌ಟಿಸಿ ಸಂಸ್ಥೆ ೨೦೨೩ರಲ್ಲಿ ಸುಮಾರು ೫,೮೦೦ ಕೋಟಿ ರೂಪಾಯಿ ಸಾಲ ಹೊಂದಿತ್ತು.

ಇದೀಗ ೫,೩೦೦ ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ ವೇತನಕ್ಕಾಗಿ ತಟ್ಟೆ ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ ಸ್ಥಿತಿಯನ್ನೂ ಜನರು ನೋಡಿದ್ದಾರೆಂದು ಪದ್ಮರಾಜ್ ಟೀಕಿಸಿದರು.