ಮಂಗಳೂರು: ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸಲು ಹೊರಡಿಸಿರುವ ಕರಡು ಅಧಿಸೂಚನೆಗೆ ಬೆಳ್ಳಾರೆ ಬಳಕೆದಾರರ ವೇದಿಕೆಯ ಸಂಚಾಲಕರಾದ ಜಯಪ್ರಸಾದ್ ಜೋಶಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸುದೀರ್ಘ ಆಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದಾರೆ.
ಹೆಸರು ಬದಲಾವಣೆಯಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಪಾದಿಸಿರುವ ಜಯಪ್ರಸಾದ್ ಜೋಶಿ ಅವರು, ಈ ನಿರ್ಧಾರದಿಂದ ಉಂಟಾಗುವ ಪ್ರಮುಖ ತೊಂದರೆಗಳನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ:
ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲು: ಸರ್ಕಾರಿ ಕಡತಗಳು, ಕಂದಾಯ ದಾಖಲೆಗಳು, ಕಚೇರಿಗಳ ನಾಮಫಲಕಗಳು ಹಾಗೂ ಸಾರ್ವಜನಿಕರ ಗುರುತಿನ ಚೀಟಿಗಳ ಬದಲಾವಣೆಗೆ ಕೋಟ್ಯಂತರ ರೂಪಾಯಿ ಅನಗತ್ಯ ವೆಚ್ಚ ತಗಲುತ್ತದೆ. ಇದು ಜನರ ತೆರಿಗೆ ಹಣದ ಅಪವ್ಯಯ.
ಆಡಳಿತಾತ್ಮಕ ಮತ್ತು ನ್ಯಾಯಾಂಗ ಗೊಂದಲ: ಕೋರ್ಟ್ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ಅಂತಿಮ ಹಂತದಲ್ಲಿರುವ ಲಕ್ಷಾಂತರ ಚಾಲ್ತಿ ಕಡತಗಳು ಹೆಸರು ಬದಲಾವಣೆಯಿಂದಾಗಿ ತಾಂತ್ರಿಕ ಗೊಂದಲಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ಥಗೊಳ್ಳಲಿದೆ. ಅಂಚೆ ಇಲಾಖೆಯ ಸೇವೆಗಳಿಗೂ ಇದರಿಂದ ಅಡಚಣೆಯಾಗಲಿದೆ.
ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ: ಮಂಗಳೂರು ಕೇವಲ ಒಂದು ತಾಲೂಕು ಕೇಂದ್ರವಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡದ ಗಡಿಗಳನ್ನು ಹೊಂದಿರುವ ಇಡೀ ವಿಶಾಲ ಜಿಲ್ಲೆಗೆ ಒಂದು ಕೇಂದ್ರದ ಹೆಸರನ್ನು ಹೇರುವುದು ಭೌಗೋಳಿಕ ಮೂರ್ಖತನ. ಇದು ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ, ಉಳ್ಳಾಲ ಭಾಗದ ಗ್ರಾಮೀಣ ಜನರ ಪ್ರಾದೇಶಿಕ ಅಸ್ಮಿತೆಗೆ ಮಾಡುವ ಅನ್ಯಾಯವಾಗಿದೆ.
ಜನಮತ ಸಂಗ್ರಹಕ್ಕೆ ಆಗ್ರಹ: ಕೇವಲ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ಷೇಪಣೆ ಆಹ್ವಾನಿಸಿದರೆ ಅದು ಗ್ರಾಮೀಣ ಜನರಿಗೆ ತಲುಪುವುದಿಲ್ಲ. ಆಕ್ಷೇಪಣೆಗಳು ಕಡಿಮೆ ಬಂದಿರುವುದನ್ನೇ ಒಪ್ಪಿಗೆ ಎಂದು ಭಾವಿಸಿ ಪಟ್ಟಭದ್ರ ಹಿತಾಸಕ್ತಿಗಳು ಲಾಭ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಬಾರದು. ಈ ವಿಷಯದಲ್ಲಿ ಮುಂದುವರಿಯುವ ಮುನ್ನ ಜಿಲ್ಲೆಯ ಕನಿಷ್ಠ 90% ಜನರನ್ನು ಒಳಗೊಂಡಂತೆ ಪ್ರತಿ ಮನೆ ಸಮೀಕ್ಷೆ ಅಥವಾ ಅಧಿಕೃತ ಜನಮತ ಸಂಗ್ರಹ (Voting/Referendum) ನಡೆಸಬೇಕು. ಇಲ್ಲದಿದ್ದರೆ ಇದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಯಾವುದೇ ಕಾನೂನು ಅಥವಾ ಆಡಳಿತಾತ್ಮಕ ಬಲವಾದ ಕಾರಣಗಳಿಲ್ಲದೆ, ಕೇವಲ ವೈಯಕ್ತಿಕ ಪ್ರಸಿದ್ಧಿಗಾಗಿ ಜಿಲ್ಲೆಯ 99% ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಈ ಮರುನಾಮಕರಣ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕೆಂದು ಜಯಪ್ರಸಾದ್ ಜೋಶಿ ಕಳಕಳಿಯಿಂದ ವಿನಂತಿಸಿದ್ದಾರೆ.
