ಮಂಗಳೂರು: ನವರಾತ್ರಿ ಭಾರತೀಯ ಸನಾತನ ಸಂಸ್ಕೃತಿಯ ಪವಿತ್ರವಾದ ಹಬ್ಬವಾಗಿದ್ದು, ಈ ದಿನಗಳಲ್ಲಿ ನಡೆಯುವ ‘ದಾಂಡಿಯಾ/ಗರ್ಬಾ’ ನೃತ್ಯವು ಹಿಂದೂ ಧರ್ಮೀಯರು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಧಾರ್ಮಿಕ ಆಚರಣೆಯಾಗಿದೆ. ಆದರೆ, ಮಂಗಳೂರು ನಗರದ ಪಬ್‌ಗಳು, ಪಾರ್ಟಿ ಹಾಲ್‌ಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ‘ದಾಂಡಿಯಾ’ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಡಿಜೆ ಮ್ಯೂಸಿಕ್ ಹಾಗೂ ಅಶ್ಲೀಲ ಪಾರ್ಟಿಗಳನ್ನು ಆಯೋಜಿಸುತ್ತಿದ್ದು ಇದಕ್ಕೆಲ್ಲ ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಬಜರಂಗದಳ ಮತ್ತು ದುರ್ಗಾವಾಹಿನಿ ಆಗ್ರಹಿಸಿದೆ.

ಈ ಕುರಿತು ಪೋಸ್ಟರ್‌ಗಳು ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇಂತಹ ಪಾರ್ಟಿಗಳ ಮುಖಾಂತರ ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆಗೆ ಆಸ್ಪದ ಮಾಡಲಾಗುತ್ತಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ದಾಂಡಿಯಾದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆಯೋಜಿಸುತ್ತಿರುವ ಈ ಕಾರ್ಯಕ್ರಮಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ.

ದಾಂಡಿಯಾ ಕಾರ್ಯಕ್ರಮದ ಮುಖಾಂತರ ಯುವಜನತೆಯನ್ನು ದುರ್ಮಾರ್ಗಕ್ಕೆ ಎಳೆಯುವ ಇಂತಹ ಯಾವುದೇ ಅಸಭ್ಯ ಪಾರ್ಟಿ, ಫ್ಯಾಷನ್ ಶೋ ಅಶ್ಲೀಲ ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಪೊಲೀಸ್ ಉಪ ಆಯುಕ್ತರನ್ನು ಭೇಟಿಯಾಗಿ ಮನವಿ ನೀಡಲಾಗಿದೆ.

ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗಳಿಗೂ ದೂರು ನೀಡಲಾಗಿದ್ದು ಇದಕ್ಕೆಲ್ಲ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದಾಗಿ ಪ್ರಾಂತ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ಜಿಲ್ಲಾ ಬಜರಂಗದಳ ಸಂಯೋಜಕ್ ಪ್ರೀತಮ್ ಕಾಟಿಪಳ್ಳ ವಿನಂತಿಸಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನ‌ರ್ ಸುಧೀರ್ ರೆಡ್ಡಿ ಅಂತಹ ಕಾನೂನು ವಿರೋಧಿ ಚಟುವಟಿಕೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ರೀತ್ಯ ಇಲ್ಲದಿದ್ದರೆ ನಾವೇ ಕಾರ್ಯಕ್ರಮ ರದ್ದುಪಡಿಸುತ್ತೇವೆ. ಹಾಗಂತ, ಯಾರೇ ಆಗಲಿ ತಾವೇ ಕಾರ್ಯಕ್ರಮ ರದ್ದುಪಡಿಸುತ್ತೇವೆಂದು ಕಾನೂನು ಕೈಗೆತ್ತಿಕೊಂಡರೆ ಅದು ಕಾನೂನು ಬಾಹಿರವಾಗುತ್ತದೆ. ಅಲ್ಲದೆ, ಕಾನೂನು ರೀತಿಯ ಕಾರ್ಯಕ್ರಮಗಳನ್ನು ನಿಲ್ಲಿಸಿದರೆಂದು ದೂರು ಬಂದರೆ, ಅಂತಹ ಕೃತ್ಯಗಳಿಗೆ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಯಾಗಬಹುದೆಂದು ಮೊದಲೇ ಎಚ್ಚರಿಸುತ್ತೇನೆಂದು ತಿಳಿಸಿದ್ದಾರೆ.