ಮಂಗಳೂರು: ಉದ್ಯೋಗ ಸೃಷ್ಟಿ, ಸಾಮಾಜಿಕ ಭದ್ರತಾ ವ್ಯಾಪ್ತಿ ವಿಸ್ತರಣೆ ಹಾಗೂ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ (ಪಿಎಂವಿಬಿಆರ್‌ವೈ) ಕುರಿತ ಜಾಗೃತಿ ಮತ್ತು ಫಲಾನುಭವಿಗಳ ಕಾರ್ಯಕ್ರಮವು ಜೂನ್ 19ರಂದು ಸಂಜೆ 4 ಗಂಟೆಗೆ ನಗರದ ಬಂದರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಪಿಎಫ್ ಆಯುಕ್ತ ಸಂದೀಪ್ ಬಿಸ್ವಾಸ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಪಿಎಫ್‌ಒ ಪ್ರಾದೇಶಿಕ ಕಚೇರಿ, ಮಂಗಳೂರು ಇದರ ಆಯೋಜನೆಯಲ್ಲಿ ನಡೆಯುವ ಈ ಕಾರ್ಯಕ್ರಮವು ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕ್ರಮದೊಂದಿಗೆ ಸಂಯೋಜಿತವಾಗಿರಲಿದೆ ಎಂದರು.

2025ರ ಜುಲೈ 1ರಂದು ಕೇಂದ್ರ ಸರ್ಕಾರ ಅನುಮೋದಿಸಿ, ಆಗಸ್ಟ್ 15ರಂದು ಆರಂಭಿಸಿರುವ ಈ ಯೋಜನೆಗೆ ₹99,446 ಕೋಟಿ ಅನುದಾನ ಮೀಸಲಿಡಲಾಗಿದೆ. 2025ರ ಆಗಸ್ಟ್ 1ರಿಂದ 2027ರ ಜುಲೈ 31ರವರೆಗೆ ಸೃಷ್ಟಿಯಾಗುವ ಔಪಚಾರಿಕ ಉದ್ಯೋಗಗಳನ್ನು ಒಳಗೊಂಡಿರುವ ಈ ಯೋಜನೆಯು ಎರಡು ವರ್ಷಗಳಲ್ಲಿ 3.5 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಮೊದಲ ಬಾರಿಗೆ ಔಪಚಾರಿಕ ಉದ್ಯೋಗಕ್ಕೆ ಸೇರುವ ಅರ್ಹ ಉದ್ಯೋಗಿಗಳಿಗೂ ಹಾಗೂ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೂ ಪ್ರೋತ್ಸಾಹಧನ ನೀಡುವುದು ಯೋಜನೆಯ ಪ್ರಮುಖ ವಿಶೇಷತೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಪ್ರಾದೇಶಿಕ ಪಿಎಫ್ ಆಯುಕ್ತ ಅಂಕಿತ್ ಸಿಂಗ್, ಪ್ರವರ್ತನಾ ಅಧಿಕಾರಿ ಅನಿತಾ ಹಾಗೂ ಲೆಕ್ಕಪತ್ರ ಅಧಿಕಾರಿ ಸುಶೀಲಾ ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)