ಬಂಟ್ವಾಳ: ಆಟೋ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪೆಲತ್ತ ಕಟ್ಟೆ ಬಸ್ ನಿಲ್ದಾಣದ ಬಳಿ ಆ.30ರಂದು ರಾತ್ರಿ ನಡೆದಿದೆ.
ಮೃತರನ್ನು ರಶೀಕ್ ಎಂದು ಗುರುತಿಸಲಾಗಿದೆ. ಮೆಲ್ಕಾರ್‌ನಲ್ಲಿ ಕೆಲಸ ಮುಗಿಸಿಕೊಂಡು ರಶೀಕ್ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಬೈಕ್’ನಲ್ಲಿ ಮುಡಿಪು ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ರಶೀಕ್ ತಮ್ಮ ಸ್ನೇಹಿತ ಅಬುಬಕ್ಕರ್ ಸಿದ್ದೀಕ್ ಎಂಬವರನ್ನು ಬೈಕ್’ನಲ್ಲಿ ಕೂರಿಸಿಕೊಂಡು ಆಲಂಪಾಡಿ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ರಾತ್ರಿ ಸುಮಾರು 8 ಗಂಟೆಗೆ ಪೆಲತ್ತಕಟ್ಟೆ ಬಸ್ ನಿಲ್ದಾಣದ ಬಳಿ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಕ್ಕಿಯ ರಭಸಕ್ಕೆ ರಶೀಕ್ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ತಲೆ ಹಾಗೂ ಹಣೆಗೆ ತೀವ್ರ ಗಾಯಗಳಾಗಿತ್ತು.
ಗಂಭೀರ ಗಾಯಗೊಂಡಿದ್ದ ಅವರನ್ನು ಅಬುಬಕ್ಕರ್ ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು ಆದರೆ, ಅದಾಗಲೆ ಅವರು ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಆಟೋ ಚಾಲಕನ ನಿರ್ಲಕ್ಷದ ಚಾಲನೆಯೇ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಚಾಲಕ ಶಿವಾಜಿ ಕುಮಾರ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

