ಮಂಗಳೂರು : ಪ್ರಿಯತಮೆಯ ಕೊಲೆಗೆ ಯತ್ನಿಸಿ ಪ್ರಿಯಕರ ನೇಣಿಗೆ ಶರಣಾಗಿರುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳ ಎಂಬಲ್ಲಿ ನಡೆದಿದೆ.
ಕೊಡ್ಮಾಣ್ ನಿವಾಸಿ ಸುಧೀರ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26)ಗೆ ಗಾಯವಾಗಿದ್ದು, ಇವರಿಬ್ಬರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದರೂ ಸಹ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು, ಮಾಡುತ್ತಿದ್ದನು. ನಿನ್ನೆ ದಿವ್ಯಾಳ ಬಾಡಿಗೆ ಮನೆ ಬಳಿಗೆ ಬಂದು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾಳಿಗೆ ಚುಚ್ಚಿದ್ದಾನೆ. ಆಗ ಆಕೆ ತಪ್ಪಿಸಿಕೊಂಡು ಹೋಗುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಘಟನೆಯಲ್ಲಿ ದಿವ್ಯಾ ಮೃತಪಟ್ಟಿರಬಹುದೆಂದು ಭಾವಿಸಿ ಸುಧೀರ್ ನೇಣಿಗೆ ಶರಣಾಗಿದ್ದಾನೆ.
ದಿವ್ಯಾಳ ಬಾಡಿಗೆ ಮನೆಗೆ ಹೋಗಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ಆಕೆಯ ಮನೆಯವರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

