ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಸುರಿದ ಮಳೆಗೆ ಜಪ್ಪಿನಮೊಗರು ಶಾಲೆಯೊಂದರ ಸಮೀಪದ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಪಕ್ಕದಲ್ಲಿರುವ ತೋಡಿಗೆ ಮಣ್ಣು ಹಾಕಿ ನೀರಿನ ಸಹಜ ಹರಿವಿಗೆ ಅಡ್ಡಿಪಡಿಸಿರುವುದು ಮಳೆ ನೀರು ರಸ್ತೆ ಹಾಗೂ ಅಂಗಡಿಗಳೊಳಗೆ ನುಗ್ಗಲು ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ ಬದಲಾಗಿ ಪ್ರತೀ ಬಾರಿಯ ಮಳೆಗೂ ನೀರು ಅಂಗಡಿಯೊಳಗೆ ನುಗ್ಗುತ್ತಿದೆ ಎಂಬುವುದು ಸ್ಥಳೀಯರ ದೂರಾಗಿದೆ ..ನೆರೆಯಿಂದ ಆರು ಅಂಗಡಿಗಳಿಗೆ ಹಾನಿಯಾಗಿದ್ದು, ವಿಶೇಷವಾಗಿ ಇಲೆಕ್ಟ್ರಿಕಲ್ ಹಾಗೂ ಗ್ಯಾರೇಜ್ ಅಂಗಡಿಗಳಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿವೆ. ರಿಪೇರಿಗೆ ನಿಲ್ಲಿಸಲಾಗಿದ್ದ ಬೈಕ್ಗಳು ಹಾಗೂ ಇಲೆಕ್ಟ್ರಾನಿಕ್ ಸಾಧನಗಳಿಗೂ ಹಾನಿಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ರಾತ್ರಿ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂಗಡಿಗಳೊಳಗೆ ತುಂಬಿದ್ದ ನೀರನ್ನು ಹೊರತೆಗೆದ್ದಾರೆ. ಆದರೆ ಸಮಸ್ಯೆಯ ಮೂಲ ಕಾರಣವಾದ ತೋಡಿಗೆ ಹಾಕಿರುವ ಮಣ್ಣನ್ನು ಇನ್ನೂ ತೆರವುಗೊಳಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. “ಕೃತಕ ನೆರೆ ಸಂಭವಿಸುವ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ನೀಡಿದ್ದೇವೆ. ಅಧಿಕಾರಿಗಳು ಭೇಟಿ ನೀಡಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡಿಲ್ಲ.. ಕಟ್ಟಡವು ತಗ್ಗು ಪ್ರದೇಶದಲ್ಲಿರುವುದರಿಂದ ಭಾರಿ ಮಳೆಯ ಸಂದರ್ಭ ಸಂಪೂರ್ಣ ಮುಳುಗಡೆಯಾಗುವ ಆತಂಕ ವ್ಯಕ್ತವಾಗುತ್ತಿದೆ ಎಂದು ಅಂಗಡಿಯವರು ದೂರಿದ್ದಾರೆ..

ಜಪ್ಪಿನಮೊಗರಿನ ನಿವಾಸಿಗಳು ಹಾಗೂ ವ್ಯಾಪಾರಿಗಳು ತಕ್ಷಣದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ..ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.