ದಕ್ಷಿಣ ಕನ್ನಡ : ಮುಂಗಾರಿನ ಪ್ರಾರಂಭದಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರದೇಶಗಳಲ್ಲಿ ಅಡಿಕೆ ಕೊಳೆ ರೋಗದ ಆತಂಕ ಎದುರಾಗಿದೆ. ಬಂಟ್ವಾಳ, ಸುಳ್ಯ,ಪುತ್ತೂರು, ಬೆಳ್ತಂಗಡಿ, ತೋಟಗಳಲ್ಲಿ ಕೊಳೆ ರೋಗ ದಿಂದಾಗಿ ಅಡಿಕೆ ಉದುರಲಾರಂಭಿ ಸಿದ್ದು, ಕಳೆದ ವರ್ಷದಂತೆ ಈ ವರ್ಷವೂ ರೇ. 60ಕ್ಕಿಂತಲೂ ಅಧಿಕ ಅಡಿಕೆ ಬೆಳೆ ನಷ್ಟ ಉಂಟಾ ದೀತೆಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಬಂಟ್ವಾಳ ತಾಲೂಕಿನ ಮಾಣಿ, ಅನಂತಾಡಿ ಬಾಧಿಸಿರುವ ಕುರಿತು ಬೆಳೆಗಾರರು ಕಳವಳ ವ್ಯಕ್ತಪಡಿಸಿದ್ದು, ಬಿದ್ದಿರುವ ಅಡಿಕೆಯನ್ನು ಅಂಗಳದಲ್ಲಿ ತಂದು ರಾತಿ ಹಾಕುತ್ತಿದ್ದಾರೆ. ಮರಗಳಲ್ಲೂ ಸಣ್ಣ ಗೊನೆಗಳು ಉದುರುತಿದ್ದು . ನಿರಂತರ ಮಳೆಯಿಂದ ಸಮರ್ಪಕವಾಗಿ ಔಷಧ ಸಿಂಪಡನೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಕೃಷಿಕರು.
ಭಾರೀ ಮಳೆಯ ಪರಿಣಾಮ ಪುತ್ತೂರು, ಸುಳ್ಯ ಭಾಗದ ಆಡಿಕೆ ತೋಟಗಳಲ್ಲಿ ಕೊಳೆರೋಗ ಪ್ರಮಾಣದಲ್ಲಿ ಉದುರುತ್ತಿದ್ದು ಫಸಲು ನಷ್ಟದ ಭೀತಿ ಮೂಡಿದೆ. ಮಳೆಯ ಪರಿಣಾಮ ಕೆಲವೆಡೆ ಮೊದಲನೇ ಹಂತದ ಔಷಧ ಸಿಂಪಡಣೆ ಸಾಧ್ಯವಾಗದಿರು ವುದು, ಇನ್ನೊಂದೆಡೆ ಪಕ್ಕದ ತೋಟಗಳಲ್ಲಿ ಔಷಧ ಸಿಂಪಡಿಸದ ಕಾರಣ ಮದ್ದು ಬಿಟ್ಟ ತೋಟದಲ್ಲಿಯೂ ರೋಗ ಕಂಡು ಬರುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಒಂದು ಗ್ರಾಮದ ಹತ್ತು ತೋಟಗಳ ಪೈಕಿ ಏಳು ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಮಳೆ ಕಡಿಮೆಯಾಗಿ ಮದ್ದು ಸಿಂಪಡಣೆ ಪ್ರಾರಂಭಗೊಂಡ ಬಳಿಕವಷ್ಟೇ ರೋಗ ನಿಯಂತ್ರಣಕ್ಕೆ ಬರಬಹುದು.
ಸುಳ್ಯ ತಾಲೂಕಿನ ಅಜ್ಞಾವರ, ಸಂಪಾಜೆ, ಗುತ್ತಿ ಗಾರು ಪರಿಸರದಲ್ಲಿ ಕೊಳೆರೋಗದ ಭೀತಿ, ಲಕ್ಷಣ ಗಳು ಕಂಡುಬಂದಿದ್ದು, ತಾಲೂಕಿನ ಬಹುತೇಕ ಕಡೆ ನಿರಂತರ ಮಳೆ/ಹವಾಮಾನ ವೈಪರೀತ್ಯದಿಂದ ಅಡಿಕೆ ನಳ್ಳಿ ಉದುರುತ್ತಿದೆ. ಮಳೆಯಿಂದಾಗಿ ಔಷಧ ಸಿಂಪಡನೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಕೊಳೆರೋಗ ಗಂಭೀರವಾಗಿಲ್ಲವಾದರೂ ನಿರಂತರ ಮಳೆಯಿಂದ ಆತಂಕ ಎದುರಾಗಿದೆ.
ಕರಾವಳಿ ಜಿಲ್ಲೆಗೆ ಅಡಿಕೆ ಬೆಳೆಯೇ ಆರ್ಥಿಕ ಶಕ್ತಿಯಾಗಿದ್ದು, ಬೆಳೆ ಹಾಗೂ ಬೆಲೆಯಲ್ಲಿ ವ್ಯತ್ಯಾಸವಾದರೆ ಇಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಅಡಿಕೆ ಬೆಳೆ ನಷ್ಟದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಆರ್ಥಿಕತೆಗೂ ಹೊಡೆತ ನೀಡಲಿದೆ ಎಂಬುದು ಕೃಷಿ ಪರಿಣತರ ಅಭಿಪ್ರಾಯ.
ಸಾಮಾನ್ಯವಾಗಿ ಪ್ರತಿವರ್ಷ ಜೂನ್ ತಿಂಗಳ ಪ್ರಾರಂಭದಲ್ಲಿ ಮುಂಗಾರು ಆರಂಭಗೊಂಡರೆ ಸುಮಾರು 15 ದಿನಗಳ ಕಾಲ ಮಳೆಯಾಗಿ ಬಳಿಕ ಒಂದು ವಾರ ಬಿಸಿಲು ಕಾಣಿಸಿಕೊಳ್ಳುತ್ತದೆ. ಈ ಅವಧಿಯನ್ನು ಬೆಳೆಗಾರರು ತೋಟಗಳಿಗೆ ಕೊಳೆರೋಗದಿಂದ ರಕ್ಷಣೆಗಾಗಿ ಮದ್ದು ಬಿಡುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ನಿರಂತರ ಮಳೆಯಾಗಿದ್ದು, ಬಿಸಿಲು ಕಾಣಿಸದೆ ಸಮರ್ಪಕವಾಗಿ ಔಷಧ ಸಿಂಪಡನೆ ಸಾಧ್ಯವಾಗಿಲ್ಲ. ಈ ಬಾರಿ ಮೇ ತಿಂಗಳಲ್ಲೇ ಹೆಚ್ಚಿನ ಮಳೆ ಬಂದಿದ್ದುದರಿಂದ ಅಡಿಕೆ ಮರಗಳು ಪಾಚಿ ಹಿಡಿದು ಜಾರುವಂತಾಗಿದ್ದು, ಕಾರ್ಮಿಕರಿಗೆ ಔಷಧ ಸಿಂಪಡನೆ ಕಷ್ಟವಾಗಿತ್ತು ಎನ್ನುತ್ತಾರೆ ಕೃಷಿಕರು.
ಎಪ್ರಿಲ್ನಲ್ಲಿ ಬಿಸಿಲಿನ ತಾಪ 38-40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಹಿಂಗಾರ ಕರಟಿ ಹೋಗಿದ್ದು, ಇದರಿಂದಲೂ ಬೆಳೆ ನಷ್ಟವಾಗಿದೆ. ಈಗ ಕೊಳೆ ರೋಗದಿಂದ ಅಡಿಕೆ ಉದುರುತ್ತಿರುವುದು ರೈತರನ್ನು ಹೆಚ್ಚಿನ ನಷ್ಟಕ್ಕೆ ತಳ್ಳಿದೆ.

