ಮಂಗಳೂರು: ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಇತ್ತೀಚೆಗೆ ಜಾಮೀನು ಪಡೆದಿದ್ದ ನಗರದ ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಫೆರೇರಾ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ವಿರುದ್ಧ ಎರಡನೇ ದೂರು ದಾಖಲಾಗಿದ್ದು ಮಹಿಳಾ ಠಾಣೆಯಲ್ಲಿ ಮತ್ತೊಬ್ಬ ಬಾಲಕನ ಕಡೆಯಿಂದ ದೂರು ದಾಖಲಾಗಿದೆ.
ಪೆರ್ಮನ್ನೂರು ಗ್ರಾಮದ ಸೈಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಪ್ರತಿ ಆದಿತ್ಯವಾರ ಪ್ರಾರ್ಥನೆಗೆ ತೆರಳುತ್ತಿದ್ದ ಅಪ್ರಾಪ್ತ 13 ವರ್ಷದ ಬಾಲಕನ ಮೇಲೆ ಸಿಪ್ರಿಯನ್ ಪಿಂಟೋ (65) ಅವರು 2026ರ ಮೇ 13ರಂದು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ರ 50/2026 ಕಲಂ 75(2) ಬಿಎನ್ಎಸ್ ಮತ್ತು ಕಲಂ 8, 12 ಫೋಕೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಈ ಹಿಂದೆ ಅಕ್ಟೋಬರ್ 15ರಂದು ಅಪ್ರಾಪ್ತ 14 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಕ್ರ 212/2026 ಕಲಂ 75(2) ಬಿಎನ್ಎಸ್ ಮತ್ತು ಕಲಂ 8, 12 ಫೋಕೋ ಕಾಯ್ದೆಯಂತೆ ಪ್ರಕರಣ ದಾಖಲಾಗಿ ಪ್ರಸ್ತುತ ತನಿಖೆಯಲ್ಲಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಅ.18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅ.30ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಮುಂದಿನ ತನಿಖೆಯ ಬಗ್ಗೆ ಕೇಂದ್ರ ಉಪ ವಿಭಾಗ ಎಸಿಪಿ ಅವರಿಗೆ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಪೋಕೋ ಕಾಯ್ದೆಯಡಿ ಆರೋಪಿಗೆ ಜಾಮೀನು ಆಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿತ್ತು. ಪಾದ್ರಿ ಸಿಪ್ರಿಯನ್ ಪಿಂಟೋ ಈ ಹಿಂದೆ ಪೆರ್ಮನ್ನೂರು ಚರ್ಚ್ ನಲ್ಲಿದ್ದಾಗಲೂ ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ.

