ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್ ವತಿಯಿಂದ, ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿ, ಪ್ರಸ್ತುತ ಶ್ರೇಷ್ಠ ಉದ್ಯಮಿಯಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಇವರಿಗೆ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ ವಿವಿಯ ಎಲ್.ಎಫ್. ರಸ್ಕೀನಾ ಸಭಾಂಗಣದಲ್ಲಿ ನಡೆಯಿತು.

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠರಾದ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ, ಎಸ್.ಜೆ. ಹಾಗೂ ಸಹಕುಲಪತಿಗಳಾದ ಡಾ. ಮೆಲ್ವಿನ್ ಡಿಕುನ್ಹಾ, ಎಸ್.ಜೆ.ರವರು ಪೇಟ ತೊಡಿಸಿ, ಶಾಲು ಮತ್ತು ಹಾರದೊಂದಿಗೆ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟರು ಅಲೋಶಿಯಸ್ ಕಾಲೇಜಿನ ತಮ್ಮ ವಿದ್ಯಾರ್ಥಿಜೀವನವನ್ನು ನೆನಪಿಸಿಕೊಂಡು ಧನ್ಯತಾ ಭಾವವನ್ನು ತೆರೆದಿಟ್ಟರು. ತಮ್ಮ ಜೀವನದಲ್ಲಿ ಒಬ್ಬ ಉದ್ಯಮಿಯಾಗಿ ಅತೀ ಹೆಚ್ಚಿನ ಯಶಸ್ಸನ್ನು ಗಳಿಸುವಲ್ಲಿ ಕಾಲೇಜಿನ ಕೊಡುಗೆಯನ್ನು ಮತ್ತು ಶಿಕ್ಷಕರನ್ನು ಸ್ಮರಿಸಿಕೊಂಡರು.

ತಮ್ಮ ಉದ್ಯಮ ಕ್ಷೇತ್ರದ ಸಾಧನೆಯನ್ನು ವಿವರಿಸುವುದರೊಂದಿಗೆ, ಯಾವುದೇ ಉದ್ಯಮವನ್ನು ಪ್ರಾರಂಭಿಸುವುದಿದ್ದರೂ ವಿಷಯದ ಬಗ್ಗೆ ಆಳವಾದ ಜ್ಞಾನವನ್ನುಗಳಿಸಿಕೊಂಡು ತನ್ಮೂಲಕ ಕಾರ್ಯಪ್ರವೃತ್ತರಾದರೆ ಯಶಸ್ಸು ಗಳಿಸಬಹುದೆಂದು ಸಲಹೆಯಿತ್ತರು. ಯುವ ವಿಜ್ಞಾನದ ವಿದ್ಯಾರ್ಥಿಗಳು ಜೀವನದಲ್ಲಿ ಸವಾಲುಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕೆಂದು ಸಲಹೆಯಿತ್ತರು.

ವಿವಿಯ ಸಹಕುಲಪತಿಗಳಾದ ಡಾ. ಮೆಲ್ವಿನ್ ಡಿಕುನ್ಹಾರವರು ಅಭಿನಂದನಾ ಭಾಷಣದಲ್ಲಿ ಶ್ರೀ ಸದಾಶಿವ ಶೆಟ್ಟರು ತಮ್ಮ ಸಾಧನೆಗಳ ಮೂಲಕ ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾದ ಒಬ್ಬ ಹಿರಿಯ ವಿದ್ಯಾರ್ಥಿ ಎಂದರು. ಮಾತ್ರವಲ್ಲ, ಅವರ ಸಾಧನೆಯ ಪಥವನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಅರಿತು, ಇನ್ನೂ ಹೆಚ್ಚಿನ ಸಾಧನೆಯನ್ನು ಸಮಾಜಕ್ಕೆ ನೀಡಬೇಕೆಂದರು.

ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋರವರು ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿರು ಉದ್ಯಮಿಯಾಗಿ ಹೆಸರು ಗಳಿಸುವುದರೊಂದಿಗೆ ಸಮಾಜದ ಅನೇಕ ಬಡವರಿಗೆ ಆರ್ಥಿಕ ಸಹಾಯ ಕೊಡುವುದರೊಂದಿಗೆ ಅಲೋಶಿಯಸ್ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಸಮಾಜದ ಅನೇಕ ಇತರ ಸಾಹಿತ್ಯಿಕ ಚಟುವಟಿಕೆಗಳಿಗೂ ಅವರ ಕೊಡುಗೆ ಅಪಾರ ಎಂದರು. ಈ ರೀತಿಯ ಚಟುವಟಿಕೆಗಳಿಂದ ಅಲೋಶಿಯಸ್ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳಿಗೆ ದೊಡ್ಡ ಪ್ರೇರಣೆಯಾಗಿದ್ದು, ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾರೆ ಎಂದರು.

ಕಾಲೇಜಿನ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ವಿವಿಯ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್ ಹಾಗೂ ಶ್ರೀಮತಿ ಶಿಲ್ಪಾ ಡಿಸೋಜ, ಸಾಂಸ್ಥಿಕ ಅಭಿವೃದ್ಧಿ ಅಧಿಕಾರಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಸೇವಿಯರ್ ಬ್ಲಾಕಿನ ನಿರ್ದೇಶಕ, ಡಾ. ಈಶ್ವರ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಕು. ಸಹನಾರವರು ವಂದಿಸಿದರು.