ಪುತ್ತೂರು/ಬೆಳ್ತಂಗಡಿ: ಪುತ್ತೂರಿನ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಮೂವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದ ಯುವಕ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 17ರಂದು ರಾತ್ರಿ ಮಹಮ್ಮದ್ ರಿಫಾಯಿ ಅವರು ತಾವು ಕೆಲಸ ಮಾಡುತ್ತಿದ್ದ ಪುತ್ತೂರಿನ ಲಾಡ್ಜ್‌ನಲ್ಲಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬುವರು ಅಲ್ಲಿಗೆ ಬಂದಿದ್ದರು. ಈ ಸಂದರ್ಭ ಆರೋಪಿಗಳು ರಿಫಾಯಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್ ರಿಫಾಯಿ ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸರು ಮೂವರ ವಿರುದ್ಧ ಅಪರಾಧ ಕ್ರಮಾಂಕ 126/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 126(2), 352, 351(2) ಹಾಗೂ 115(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.