ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆಗೆ ಗೈರುಹಾಜರಾಗಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಶಿರ್ಲಾಲು ಗ್ರಾ.ಪಂ. ಪಿಡಿಒ ಸುಶೀಲ ಅವರನ್ನು ಅಮಾನತುಗೊಳಿಸಿ ದ.ಕ. ಜಿ.ಪಂ. ಸಿಇಒ ಆದೇಶ ಹೊರಡಿಸಿದ್ದಾರೆ.
ಶಿರ್ಲಾಲು ಗ್ರಾಮಪಂಚಾಯತಿನಲ್ಲಿ ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚಿಸಲು ವಿಶೇಷ ಗ್ರಾಮಸಭೆಯನ್ನು ಸೆ.25 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಅಭಿವೃದ್ಧಿ ಅಧಿಕಾರಿಯವರು ಈ ಸಭೆಯನ್ನು ಸೆ.21 ರಂದು ನಿಗದಿಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.
ಆದರೆ ಸಭೆಗೆ ಜನರು ಬಂದರೂ ಅಭಿವೃದ್ಧಿ ಅಧಿಕಾರಿ ಗೈರುಹಾಜರಾಗಿದ್ದರು ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರೂ ಗ್ರಾ.ಪಂ ಗೆ ಆಗಮಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಲ್ಲಿಯೂ ಕೇಳಿಕೊಂಡಿದ್ದರು.
ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಯವರು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ವರದಿ ನೀಡಿದ್ದು ಈ ವರದಿಯ ಆಧಾರದ ಮೇಲೆ ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸೆ 22 ರಂದು ಆದೇಶ ಹೊರಡಿಸಿದ್ದಾರೆ.

