ಮಂಗಳೂರು: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಸಮಿತಿಯ ಸದಸ್ಯ ಬಿ ನಾರಾಯಣರು(65 ವರ್ಷ)  ಹೃದಯಘಾದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಾರ್ಮಿಕ ವರ್ಗದಿಂದ ಬಂದ ನಾರಾಯಣರು ತನ್ನ ಬಾಲ್ಯದಿಂದಲೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಗಣೇಶ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇರಿದ ಇವರು ತಮ್ಮ ಉತ್ತಮ ಕಾರ್ಯ ನಿರ್ವಹಣೆಯಿಂದ ಪಾರ್ಟನರ್ ಆಗಿ ನಿವೃತ್ತಿ ಹೊಂದಿದ್ದರು. ಎಐಟಿಯುಸಿ ನೇತ್ರತ್ವದ ಗಣೇಶ ಬೀಡಿ ನೌಕರರ ಸಂಘದಲ್ಲಿ ಸಕ್ರಿಯವಾಗಿದ್ದ ಇವರು ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಕರ್ನಾಟಕ ರಾಜ್ಯ ಬೀಡಿ ವಕರ‍್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿಯೂ ಅವರು ದುಡಿದಿದ್ದರು. ಸಿಪಿಐ ಸದಸ್ಯರಾಗಿದ್ದ ಇವರು ರಾಜಕೀಯದಲ್ಲೂ ಸಕ್ರಿರಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ನಾರಾಯಣರು ತನ್ನ ಊರಾದ ಮಾರಿಪಳ್ಳ ಅಲ್ಲದೆ ಫರಂಗಿಪೇಟೆ, ಬಿ ಸಿ ರೋಡ್, ಬಂಟ್ವಾಳದಲ್ಲೂ ಜನಪ್ರಿಯರಾಗಿದ್ದರು. ಎಂದೂ ಪ್ರಚಾರ ಬಯಸದ ಇವರು ಎಲೆಮರೆಯ ಕಾಯಿಯಾಗಿಯೇ ಉಳಿದಿದ್ದರು.

ನಾರಾಯಣರ ನಿಧನಕ್ಕೆ ಕಾರ್ಮಿಕ ವರ್ಗ ಅದರಲ್ಲೂ ಮೂಖ್ಯವಾಗಿ ಗಣೇಶ ಬೀಡಿ ನೌಕರರ ಸಂಘ ತನ್ನ ಸಂತಾಪ ಸೂಚಿಸುತ್ತದೆ. ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ತಿಳಿಸಿದ್ದಾರೆ.