ಮಂಗಳೂರು : ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಪ್ರಕರಣ ಸೇರಿದಂತೆ ಒಟ್ಟು ಆರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಾಹುಲ್ ಹಮೀದ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಿನೇಶ್ ರಾಜ್ ಕೊಲೆ ಪ್ರಕರಣ ಸೇರಿದಂತೆ ಮೂರು ಪ್ರಮುಖ ಪ್ರಕರಣಗಳಲ್ಲಿ ನ್ಯಾಯಾಲಯವು ಈತನ ವಿರುದ್ಧ ಈಗಾಗಲೇ ವಾರಂಟ್ ಹೊರಡಿಸಿತ್ತು. ಆರೋಪಿ ಸಾಹುಲ್ ಹಮೀದ್ ವಿರುದ್ಧ ಕಿಡ್ನಾಪ್ (ಅಪಹರಣ), ಸುಲಿಗೆ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3, ಮಂಗಳೂರು ಗ್ರಾಮಾಂತರದಲ್ಲಿ 1, ಉತ್ತರ (ಬಂದರು ಠಾಣೆ ) ಪೊಲೀಸ್ ಠಾಣೆಯಲ್ಲಿ 1 ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಜೈಲಿನಲ್ಲೇ ಕೊಲೆ ಯತ್ನ ನಡೆಸಿದ ಆರೋಪ: ಬರ್ಕೆ ಠಾಣೆಯಲ್ಲಿ ದಾಖಲಾದ ಐಪಿಸಿ 307 (ಕೊಲೆ ಯತ್ನ) ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಶಾಹುಲ್ ಹಮೀದ್ ಜೈಲಿನಲ್ಲಿದ್ದ ಸಂದರ್ಭದಲ್ಲಿಯೇ ಶಶಿಕಿರಣ್ ಎಂಬಾತನ ಕೊಲೆಗೆ ಯತ್ನಿಸಿದ ಆರೋಪ ಈತನ ಮೇಲಿದೆ. ಈ ಹಿಂದೆ ನರಸಿಂಹ ಶೆಟ್ಟಿಗಾರ್ ಹಾಗೂ ಪೊಳಲಿ ಅನಂತ ಮೂರ್ತಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊಂದಿದ್ದರೂ, ಬಳಿಕ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಹೊಸ ಪ್ರಕರಣ ದಾಖಲು: ಕಳೆದ 11 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಾಹುಲ್ ಹಮೀದ್ ವಿರುದ್ಧ ಕೋರ್ಟ್ ಹಲವು ಬಾರಿ ವಾರಂಟ್ ಹಾಗೂ ಪ್ರಖ್ಯಾಪನೆಗಳನ್ನು ಹೊರಡಿಸಿತ್ತು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದಕ್ಕಾಗಿ ಆರೋಪಿ ಶಾಹುಲ್ ಹಮೀದ್ ವಿರುದ್ಧ ಇದೀಗ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

